ಕಲ್ಯಾಣಪುರ: ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್ ವಂ.ವಲೇರಿಯನ್ ಮೆಂಡೋನ್ಸಾ ನಿಧನ

Update: 2024-07-03 15:17 GMT

ಉಡುಪಿ, ಜು.3: ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ರೆಕ್ಟರ್ ವಂ.ವಲೇರಿಯನ್ ಮೆಂಡೋನ್ಸಾ ಬುಧವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಶಿರ್ವ ಸಮೀಪದ ಪಿಲಾರ್ ಚರ್ಚಿನಲ್ಲಿ 1949ರ ಡಿ.9ರಂದು ಜನಿಸಿದ ಇವರು, 1976ರ ಮೇ 7ರಂದು ಗುರುದೀಕ್ಷೆ ಪಡೆದುಕೊಂಡಿದ್ದರು. ಅವರು ರೋಮ್‌ನ ಅರ್ಬನ್ ಯೂನಿವರ್ಸಿಟಿಯಿಂದ ಬಿಟೆಕ್ ಜೊತೆಗೆ ಇಂಗ್ಲಿಷ್ನಲ್ಲಿ ಎಂಎ ಮತ್ತು ಮೀಡಿಯಾ ಸಂವಹನದಲ್ಲಿ ಡಿಪ್ಲೊಮಾವನ್ನು (ರೇಡಿಯೋ ಮತ್ತು ಎವಿ ಏಡ್ಸ್) ಪಡೆದಿದ್ದರು.

ಜೆಪ್ಪುವಿನ ಸೇಂಟ್ ಆಂಟೋನಿ ಆಶ್ರಮದ ಸಹಾಯಕ ನಿರ್ದೇಶಕರಾಗಿ, ವಾಮಂಜೂರಿನಲ್ಲಿ ಸಹಾಯಕ ಧರ್ಮಗುರು ಗಳಾಗಿ, ಮಂಗಳೂರು ಕೆನರಾ ಕಮ್ಯುನಿಕೇಶನ್ ಕೇಂದ್ರದ ಕಾರ್ಯದರ್ಶಿಯಾಗಿ, ಕಲ್ಯಾಣಪುರದಲ್ಲಿ ಸಹಾಯಕ ಧರ್ಮ ಗುರುಗಳಾಗಿ ಮಂಗಳೂರು ಮಿಲಾಗ್ರಿಸ್, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಹಾಗೂ ಐಕಳದ ಪೊಂಪೈ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ತಲ್ಲೂರಿನ ಚರ್ಚ್ ಆಡಳಿತಾಧಿಕಾರಿಯಾಗಿ, ಮಂಗಳೂರಿನ ಸಂದೇಶ್ ಸಂಸ್ಥೆಯ ನಿರ್ದೇಶಕರು ಮತ್ತು ಪ್ರಾಂಶುಪಾಲರು ಮತ್ತು ಕೆಆರ್ಸಿಬಿಸಿ ಕಾರ್ಯದರ್ಶಿರಾಗಿ, ಬಾರ್ಕೂರಿನ ಚರ್ಚಿನಲ್ಲಿ ಧರ್ಮಗುರು, ಉಡುಪಿ ಧರ್ಮಪ್ರಾಂತ್ಯದ ಕುಲಪತಿ, ಉಡುಪಿ ಸಾಮಾಜಿಕ ಸಂವಹನ ಆಯೋಗದ ನಿರ್ದೇಶಕರಾಗಿ ಉಡುಪಿ ಶೋಕಮಾತಾ ದೇವಾಲಯದ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದರು.

ಪ್ರಸ್ತುತ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನ ಪ್ರಧಾನ ಧರ್ಮಗುರು ಗಳಾಗಿ ಸೇವೆ ಸಲ್ಲಿಸುತ್ತಿದ್ದ ವಂ.ವಲೇರಿಯನ್ ಮೆಂಡೊನ್ಸಾ, ಖ್ಯಾತ ಸಂಗೀತ ಗಾರರು ಕೂಡ ಆಗಿದ್ದರು. ಅವರ ಹಲವಾರು ಭಕ್ತಿಗೀತೆಗಳ ಧ್ವನಿಸುರುಳಿಗಳು ಪ್ರಕಟಗೊಂಡಿವೆ.

ವಂ.ವಲೇರಿಯನ್ ಮೆಂಡೋನ್ಸಾ ಅವರ ನಿಧನಕ್ಕೆ ಉಡುಪಿ ಧರ್ಮಾಧ್ಯಕ್ಷ ಅತಿ ವಂ.ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಡಾ.ರೋಶನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿ ಕಾರಿ ವಂ.ಡೆನಿಸ್ ಡೆಸಾ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News