ಉಡುಪಿ, ಹಿರಿಯಡ್ಕದಲ್ಲಿ ಭಾರೀ ಸುಂಟರಗಾಳಿ| ಮನೆ, ಎರಡು ರಿಕ್ಷಾಗಳಿಗೆ ಹಾನಿ

Update: 2024-07-26 13:54 GMT

ಉಡುಪಿ: ಹಿರಿಯಡ್ಕ ಸಮೀಪ ಕುಕ್ಕೆಹಳ್ಳಿ ಬಜೆ ಬಳಿ ಶುಕ್ರವಾರ ನಸುಕಿನ ವೇಳೆ 2 ಗಂಟೆ ಸುಮಾರಿಗೆ ಬೀಸಿದ ಸುಂಟರ ಗಾಳಿಗೆ ತೆಂಗಿನ ಮರ ಬಿದ್ದು ಮನೆ ಹಾಗೂ ಎರಡು ರಿಕ್ಷಾಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಭಾರೀ ಗಾಳಿ ಮಳೆಗೆ ಬಜೆಯ ಅಮ್ಮಣ್ಣಿ ಸೇರಿಗಾರ್ತಿ ಎಂಬವರ ಮನೆ ಸಮೀಪದ ತೆಂಗಿನ ಮರ ಮನೆಯ ಮೇಲೆ ಬಿದ್ದು ಮನೆ ಹಾನಿಯಾಗಿದ್ದು, ಅಲ್ಲೇ ಸಮೀಪ ನಿಲ್ಲಿಸಿದ್ದ ಅಮ್ಮಣಿ ಅವರ ಮಕ್ಕಳಾದ ಗಣಪತಿ ಸೇರಿಗಾರ ಹಾಗೂ ರವಿ ಸೇರಿ ಗಾರ ಎಂಬವರ ಅಟೋ ರಿಕ್ಷಾಗಳು ಸಂಪೂರ್ಣ ಜಖಂ ಗೊಂಡಿವೆ. ಇದರಿಂದ ಲಕ್ಷಾಂತರ ನಷ್ಟ ರೂ. ಉಂಟಾಗಿದೆ ಎಂದು ತಿಳಿದು ಬಂದಿದೆ.

ಮಠದ ಬೃಂದಾವನಕ್ಕೆ ಹಾನಿ: ಉಡುಪಿ ನಗರದಲ್ಲಿ ಶುಕ್ರವಾರ ನಸುಕಿನ ವೇಳೆ ಬೀಸಿದ ಭಾರೀ ಸುಂಟರಗಾಳಿಗೆ ಶ್ರೀಕೃಷ್ಣ ಮಠದ ಬೃಂದಾವನ, ಹೊಟೇಲಿನ ಮೇಲ್ಛಾವಣಿ, ಫ್ಲೇಕ್ಸ್‌ಗಳಿಗೆ ಹಾನಿ ಸಂಭವಿಸಿದೆ.

ಭಾರೀ ಗಾಳಿಗೆ ನಗರದ ಮಸೀದಿ ಸಮೀಪದ ಒಳರಸ್ತೆಯಲ್ಲಿರುವ ಮರ ಧರೆಗೆ ಬಿದ್ದಿದ್ದು, ನಾರ್ತ್ ಸ್ಕೂಲ್ ಸಮೀಪ ಸೇರಿ ದಂತೆ ಹಲವು ಕಡೆ ಅಳವಡಿಸ ಲಾದ ಫ್ಲೆಕ್ಸ್‌ಗಳಿಗೆ ಹಾನಿಯಾಗಿವೆ. ಅದೇ ರೀತಿ ರಾಜಾಂಗಣ ಸಮೀಪ ಇರುವ ಹೊಟೇಲು ಮೇಲ್ಛಾವಣಿ ಹಾಗೂ ಅಲ್ಲೇ ಹತ್ತಿರ ಇರುವ ಶ್ರೀಕೃಷ್ಣ ಮಠದ ಬೃಂದಾವನ ಕಟ್ಟಡಕ್ಕೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಇದರಿಂದ ಅಪಾರ ನಷ್ಟ ಉಂಟಾಗಿದೆ.

375 ವಿದ್ಯುತ್ ಕಂಬಗಳು ಧರೆಗೆ

ಗುರುವಾರ ಸಂಜೆಯಿಂದ ಜಿಲ್ಲೆಯಲ್ಲಿ ಬೀಸಿದ ಭಾರೀ ಗಾಳಿಮಳೆಗೆ ಕುಂದಾಪುರ ಭಾಗದಲ್ಲಿ 200ಕ್ಕೂ ಅಧಿಕ ಸೇರಿದಂತೆ ಒಟ್ಟು 375 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದು ಮೆಸ್ಕಾಂಗೆ ಅಪಾರ ನಷ್ಟ ಉಂಟಾಗಿದೆ.

ಜಿಲ್ಲೆಯಲ್ಲಿ ಒಟ್ಟು ಎಂಟು ಕಿ.ಮೀ. ಉದ್ದದ ವಿದ್ಯುತ್ ತಂತಿ, 13 ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಯಾಗಿದ್ದು, ಇದರಿಂದ ಒಟ್ಟು 63 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News