ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧ್ಯ: ಐವನ್ ಡಿ’ಸೋಜ

Update: 2024-10-01 17:14 GMT

ಉಡುಪಿ, ಅ.1: ಶೀಘ್ರವೇ ನಡೆಯುವ ಸ್ಥಳೀಯಾಡಳಿತ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ನಾವು ಜಯಗಳಿಸ ಬೇಕಾದರೆ ಜವಾಬ್ದಾರಿಗಳನ್ನು ಹಂಚಿಕೊಂಡು ಕೆಲಸ ಮಾಡಬೇಕಾಗುತ್ತದೆ. ಪಕ್ಷಕ್ಕೆ ಒಟ್ಟು ಮತಗಳ ಸಂಖ್ಯೆ ಕಡಿಮೆ ಇದ್ದರೂ ಇತರ ಮತಗಳನ್ನು ಗಳಿಸಲು ಪ್ರಯತ್ನಪಟ್ಟಲ್ಲಿ ಜಯಗಳಿಸುವುದರಲ್ಲಿ ಸಂಶಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಐವನ್ ಡಿಸೋಜ ಅಭಿಪ್ರಾಯ ಪಟ್ಟಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮುಂಬರುವ ವಿಧಾನಪರಿಷತ್ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಹಾಗೂ ಚುನಾವಣೆಯ ರೂಪು ರೇಷೆ ತಯಾರಿಸಲು ಸೋಮವಾರ ಸಂಜೆ ನಡೆದ ಸಭೆಯಲ್ಲಿ ಅವರು ಮಾತನಾಡುತಿದ್ದರು. ಚುನಾವಣೆ ಅಂದರೆ ಏಳುಬೀಳುಗಳ ಸಮ್ಮಿಲನ. ಈಗಾಗಲೇ ಹಲವಾರು ಆಕಾಂಕ್ಷಿಗಳು ಸ್ಪರ್ಧೆಗೆ ತಮ್ಮ ಉಮೇದ್ವಾರಿಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.

ಮೂಡಾದಂತಹ ಸಣ್ಣ ವಿಷಯವನ್ನು ಹಿಡಿದುಕೊಂಡು ಬಿಜೆಪಿ ದೇಶಾದ್ಯಾಂತ ಅಪಪ್ರಚಾರ ಮಾಡುತ್ತಿದೆ. ಇದರಿಂದ ಕಾರ್ಯಕರ್ತರು ಧೃತಿಗೆಡದೆ ಜನತೆಗೆ ಸತ್ಯವನ್ನು ತಿಳಿಸುವ ಪ್ರಯತ್ನವನ್ನು ಮಾಡಬೇಕು ಎಂದವರು ಹೇಳಿದರು.

ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಮಾತನಾಡಿ, ಶಾಸಕರು ಇದ್ದ ಕ್ಷೇತ್ರಗಳಲ್ಲಿ ಮಾತ್ರ ಪಕ್ಷ ಸಂಘಟನೆ ಬೆಳೆಯುತ್ತಿದೆ. ಈ ಅಸಮತೋಲನವನ್ನು ಸರಿಪಡಿಸಬೇಕಾಗಿದೆ. ಸರಕಾರದ ಸೌಲಭ್ಯಗಳನ್ನು ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ ಕಾರ್ಯಕರ್ತರು ತೊಡಗಿಸಿ ಕೊಳ್ಳಬೇಕಾಗಿದೆ ಎಂದರು.

186 ರಾಷ್ಟ್ರಗಳಲ್ಲಿ ಮಹಾತ್ಮಗಾಂಧಿಯವರ ಹೆಸರು ಅಜರಾಮರವಾಗಿ ಉಳಿದಿದೆ. ಆದರೆ ಗಾಂಧಿಯ ನಾಡಲ್ಲಿ ಬಿಜೆಪಿ ತನ್ನ ಕಾರ್ಯಕರ್ತರ ಮೂಲಕ ಗಾಂಧಿಗೆ ಅವಹೇಳನ ಮಾಡುತ್ತಿದೆ. 136 ಶಾಸಕರು ಇರುವ ಸರಕಾರವನ್ನು ಕೆಡವಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಬಿಜೆಪಿ ಇದರಲ್ಲಿ ಖಂಡಿತ ಯಶಸ್ವಿಯಾಗಲಾರದು ಎಂದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಪ್ರತೀ ಪಂಚಾಯತ್ ಗಳಲ್ಲಿ ನಮ್ಮ ಪರಂಪರಾಗತ ಮತಗಳಿವೆ. ಇದನ್ನು ಉಳಿಸಿಕೊಂಡು ಇತರ ಮತಗಳನ್ನು ಪಡೆಯವಲ್ಲಿ ಪ್ರಯತ್ನ ಪಡಬೇಕು.ಇದಕ್ಕೆ ರಾಜಕೀಯ ತಂತ್ರಗಾರಿಕೆ ಮುಖ್ಯ. ಕ್ಷೇತ್ರವಾರು ಆಯ್ಕೆಗೊಂಡ ಉಸ್ತುವಾರಿಗಳು ತಮ್ಮ ತಂತ್ರಗಾರಿಕೆಯ ಮೂಲಕ ಮತಗಳನ್ನು ಗಳಿಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಎಂ.ಎ.ಗಫೂರ್, ಕಿಶನ್‌ಹೆಗ್ಡೆ ಕೊಳ್ಕೆಬೈಲು, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಹರೀಶ್ ಕಿಣಿ, ಕಾಪು ದಿವಾಕರ ಶೆಟ್ಟಿ, ಬಿ.ನರಸಿಂಹ ಮೂರ್ತಿ, ಮಲ್ಯಾಡಿ ಶಿವರಾಮ ಶೆಟ್ಟಿ, ಕೃಷ್ಣಮೂರ್ತಿ ಕಾರ್ಕಳ, ದಿನೇಶ್ ಹೆಗ್ಡೆ ಮೊಳಹಳ್ಳಿ, ವಾಸುದೇವ ಯಡಿಯಾಳ, ಪ್ರಖ್ಯಾತ ಶೆಟ್ಟಿ, ಬಿಪಿನ್‌ಚಂದ್ರ ಪಾಲ್ ನಕ್ರೆ, ಬ್ಲಾಕ್ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ರಮೇಶ್ ಕಾಂಚನ್, ನವೀನಚಂದ್ರ ಸುವರ್ಣ, ಸದಾಶಿವ ದೇವಾಡಿಗ, ದಿನಕರ ಹೇರೂರು, ಸಂತೋಷ್ ಕುಲಾಲ್, ಶಂಕರ ಕುಂದರ್, ಕುಶಲ ಶೆಟ್ಟಿ, ದೇವಕಿ ಸಣ್ಣಯ್ಯ, ನೀರೆ ಕೃಷ್ಣ ಶೆಟ್ಟಿ, ಸರಸು ಬಂಗೇರ, ಡಾ.ಸುನಿತಾ ಶೆಟ್ಟಿ, ರೇವತಿ ಶೆಟ್ಟಿ, ವೈ.ಸುಕುಮಾರ್ ಮಂಜುನಾಥ ಪೂಜಾರಿ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಸ್ತಾವನೆಗೈದರು. ವೆರೋನಿಕಾ ಕರ್ನೇಲಿಯೋ ಸ್ವಾಗತಿಸಿದರು. ಇತ್ತೀಚೆಗೆ ಅಗಲಿದ ಪಕ್ಷದ ಮುಖಂಡರಿಗೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜ್ಯೋತಿ ಹೆಬ್ಬಾರ್ ನುಡಿನ ಮನ ಸಲ್ಲಿಸಿದರು. ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News