ಕಿತ್ತೂರು ಚೆನ್ನಮ್ಮ ಬ್ರಿಟಿಷರನ್ನು ದಿಟ್ಟವಾಗಿ ಎದುರಿಸಿದ ಧೀರ ಮಹಿಳೆ: ಉಡುಪಿ ಜಿಲ್ಲಾಧಿಕಾರಿ

Update: 2024-10-06 12:04 GMT

ಉಡುಪಿ, ಅ.6: ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 200 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಕಿತ್ತೂರಿನಲ್ಲಿ ಹಮ್ಮಿಕೊಂಡಿರುವ ಉತ್ಸವದ ಭಾಗವಾದ ಕಿತ್ತೂರು ವಿಜಯೋತ್ಸವ ವಿಜಯ ಜ್ಯೋತಿ ಯಾತ್ರೆಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಇಂದು ಉಡುಪಿಯ ಪ್ರವಾಸಿ ಮಂದಿರದಲ್ಲಿ ಸ್ವಾಗತಿಸಿ ರಾಣಿ ಚೆನ್ನಮ್ಮ ಪುತ್ತಳಿಗೆ, ಪುಷ್ಪ ಹಾರಾರ್ಪಣೆಗೈದದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಚೆನ್ನಮ್ಮ ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 200 ವರ್ಷಗಳು ತುಂಬಿರುವ ಹಿನ್ನೆಲೆ ಯಲ್ಲಿ ಅದನ್ನು ರಾಜ್ಯಾದ್ಯಂತ ವಿಜಯೋತ್ಸವ ರೀತಿಯಲ್ಲಿ ಆಚರಿಸಲಾಗುತ್ತಿದೆ. ರಾಜ್ಯದೆಲ್ಲೆಡೆ ಸಂಚರಿಸಲಿರುವ ವಿಜಯ ಜ್ಯೋತಿ ಯಾತ್ರೆಯನ್ನು ನಮ್ಮ ಜಿಲ್ಲೆಗೆ ಅತ್ಯಂತ ಗೌರವಯುತವಾಗಿ ಬರಮಾಡಿಕೊಳ್ಳಲಾಗಿದೆ. ಚೆನ್ನಮ್ಮ ವೀರ ಮಹಿಳೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ, ಬ್ರಿಟಿಷರನ್ನು ದಿಟ್ಟವಾಗಿ ಎದುರಿಸದ ಮಹಿಳೆ. ಆ ಕಾರಣಕ್ಕಾಗಿ ಆಕೆ ಜನಮನದಲ್ಲಿ ಎಲ್ಲರ ಕಣ್ಮಣಿಯಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ.ಎ.ಹೆಗಡೆ, ನಗರಸಭೆ ಪೌರಾಯುಕ್ತ ರಾಯಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಹಾಕಪ್ಪ ಲಮಾಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿಗಳಾದ ಸುಬ್ರಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ., ಡಾ.ಉಮೇಶ್ ಪುತ್ರನ್, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾ ರಿಗಳಾದ ನರಸಿಂಹ ಮೂರ್ತಿ, ದಿವಾಕರ ಶೆಟ್ಟಿ, ಭುವನಪ್ರಸಾದ್, ರಂಜಿನಿ, ಜಗನ್ನಾಥ ಪಣಸಾಲೆ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿಚಿಕ್ಕಮಠ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಾದ್ಯಂತ ಸಂಚರಿಸುತ್ತಿರುವ ಈ ಯಾತ್ರೆಯು ದ.ಕ. ಜಿಲ್ಲೆಯಿಂದ ಉಡುಪಿಗೆ ಆಗಮಿಸಿದ್ದು, ಮುಂದೆ ಈ ಯಾತ್ರೆ ಶಿವಮೊಗ್ಗ ಜಿಲ್ಲೆಗೆ ತೆರಳಲಿದೆ.

ಕಾಪು: ಶಿರ್ವದಲ್ಲಿ ಕನ್ನಡ ಜ್ಯೋತಿ ರಥಕ್ಕೆ ಸ್ವಾಗತ

ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕಾರ್ಯಕ್ರಮದಡಿಯಲ್ಲಿ ರಾಜ್ಯದಾದ್ಯಂತ ಸಂಚ ರಿಸುತ್ತಿರುವ ಕನ್ನಡ ಜ್ಯೋತಿ ರಥವನ್ನು ಕಾಪು ತಹಶಿಲ್ದಾರ್ ಪ್ರತಿಭಾ ಆರ್. ಕಾಪು ತಾಲೂಕಿನ ಶಿರ್ವದಲ್ಲಿ ಇಂದು ಸ್ವಾಗತಿಸಿದರು.

ಬಳಿಕ ಮಾತನಾಡಿದ ಅವರು, ಕನ್ನಡವು ಮೇರು ಭಾಷೆ. ಮಾತೃ ಭಾಷಿಗರಾಗಿರುವ ನಾವು ಸಂಸ್ಕೃತಿಯಲ್ಲೂ, ವ್ಯವಹಾರ ದಲ್ಲೂ, ಆಚಾರ- ವಿಚಾರದಲ್ಲೂ ಕನ್ನಡವನ್ನು ಬಳಸಿದಾಗ ಮಾತ್ರ ಕನ್ನಡ ಭಾಷೆಯ ಉಳಿವು ಸಾಧ್ಯ.ಕನ್ನಡವು ಅತ್ಯಂತ ಪ್ರಾಚೀನ ಭಾಷೆ. ವೈಜ್ಞಾನಿಕ ಮತ್ತು ತಾರ್ಕಿಕ ನೆಲೆಯಲ್ಲಿ ರೂಪುಗೊಂಡಿದೆ. ಕನ್ನಡವು ಲಿಪಿಗಳ ರಾಣಿಯಾಗಿದೆ. ಎಂಟು ಜ್ಞಾನ ಪೀಠ ಪಡೆದು ಶ್ರೀಮಂತವಾಗಿರುವ ಕನ್ನಡವು ನಮ್ಮ ಬದುಕಿನ ಗುರುತಾಗಬೇಕು. ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಕನ್ನಡವು ವ್ಯಾವಹಾರಿಕ ಭಾಷೆಯಾಗಿ ಬೆಳೆಯಬೇಕು ಎಂದು ತಿಳಿಸಿದರು.

ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಮರಾಠೆ, ಕಾರ್ಯದರ್ಶಿ ಪಾಟ್ಕರ್, ಕಂದಾಯ ನಿರೀಕ್ಷ ಇಜ್ಜಾರ್ ಸಾಬಿರ್ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಶಿರ್ವದ ಪೇಟೆ ಬೀದಿಯಲ್ಲಿ ಮೆರವಣಿಗೆ ನಡೆಯಿತು. ಈ ರಥವು ಇಂದು ಕಾಪು ತಾಲೂಕಿನಾದ್ಯಂತ ಸಂಚರಿಸಿ, ನಾಳೆ ಉಡುಪಿ ತಾಲೂಕಿಗೆ ಆಗಮಿಸಲಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News