ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ ದಿನಾಚರಣೆ

Update: 2024-10-06 12:09 GMT

ಮಣಿಪಾಲ, ಅ.6: ಮಾಹೆ ಮಣಿಪಾಲದ ವಿಪತ್ತು ನಿರ್ವಹಣಾ ಕೇಂದ್ರ, ಕಸ್ತೂರ್ಬಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ಆಡಳಿತ ವಿಭಾಗ ಮತ್ತು ಸಮುದಾಯ ವೈದ್ಯಕೀಯ ವಿಭಾಗಗಳ ಸಹಯೋಗದೊಂದಿಗೆ ಅಂತಾ ರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವ ದಿನಾಚರಣೆಯನ್ನು ಶನಿವಾರ ಮಣಿಪಾಲದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ತುರ್ತು ವೈದ್ಯಕೀಯ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಜಯರಾಜ್ ಮೈಂಬಿಲ್ಲಿ ಬಾಲಕೃಷ್ಣನ್ ಮಾತನಾಡಿ, ವಿಪತ್ತು ನಿರ್ವಹಣೆಯು ತಕ್ಷಣದ ಪ್ರತಿಕ್ರಿಯೆ ಮತ್ತು ದೀರ್ಘಾವಧಿಯ ಯೋಜನೆ ಎರಡಕ್ಕೂ ಸಂಬಂಧಿಸಿದೆ. ಶಿಕ್ಷಣದ ಮೂಲಕ, ಬಿಕ್ಕಟ್ಟುಗಳನ್ನು ನಿಭಾಯಿಸಲು, ಆಗುವ ತೊಂದರೆಗಳನ್ನು ಕಡಿಮೆ ಮಾಡಲು ಮತ್ತು ಸಮುದಾಯಗಳನ್ನು ಬೆಂಬಲಿಸಲು ನಾವು ಆರೋಗ್ಯ ವೃತ್ತಿಪರರನ್ನು ಸಜ್ಜುಗೊಳಿಸಬಹುದು. ಮುಂದಿನ ಪೀಳಿಗೆಯಲ್ಲಿ ಈ ಮೌಲ್ಯಗಳನ್ನು ತುಂಬುವುದು ನಮ್ಮ ಗುರಿಯಾಗಿದೆ ಎಂದರು.

ಎಂಐಟಿಯ ನಿರ್ದೇಶಕ ಡಾ.ಅನಿಲ್ ರಾಣಾ ಮಾತನಾಡಿ, ವಿಪತ್ತು ನಿರ್ವಹಣೆಯು ಕೇವಲ ಒಂದು ಕ್ಷೇತ್ರದ ಜವಾಬ್ದಾರಿ ಯಲ್ಲ. ಇಂಜಿನಿಯರ್ ಗಳು, ಆರೋಗ್ಯ ವೃತ್ತಿಪರರು ಮತ್ತು ಸಂವಹನಕಾರರು ಎಲ್ಲರೂ ವಿಪತ್ತುಗಳ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಭವಿಷ್ಯಕ್ಕಾಗಿ ಚೇತರಿಸಿಕೊಳ್ಳುವ ವ್ಯವಸ್ಥೆಗಳನ್ನು ನಿರ್ಮಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ತುರ್ತು ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮನು ಸುಧಿ, ಮಾಹೆ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ.ಶರತ್ ರಾವ್ ಹಾಗೂ ಆನ್‌ಲೈನ್ ಮೂಲಕ ಇನ್ಸ್ಟಿಟ್ಯೂಟ್ ಆಫ್ ಸೇಫ್ಟಿ ಅಂಡ್ ಸೆಕ್ಯುರಿಟಿ ಮ್ಯಾನೇಜ್ಮೆಂಟ್‌ನ ಸಿಇಓ ಪ್ರೊ.ಸಂತೋಷ್ ಕುಮಾರ್, ಮತ್ತು ಯುಎನ್ ಎಸ್ಕ್ಯಾಪ್ ಮುಖ್ಯಸ್ಥ ಸಂಜಯ್ ಕೆ.ಶ್ರೀವಾಸ್ತವ ಮಾತನಾಡಿದರು.

ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮಣಿಪಾಲ್ ಸ್ಕೂಲ್ ಆಫ್ ಕಮ್ಯುನಿಕೇಷನ್‌ನ ನಿರ್ದೇ ಶಕಿ ಡಾ.ಪದ್ಮಾ ರಾಣಿ, ಎಂಐಟಿಯ ಜಂಟಿ ನಿರ್ದೇಶಕ ಡಾ.ಸೋಮಶೇಖರ್ ಬಹ್ತ್, ಆಸ್ಪತ್ರೆ ಆಡಳಿತ ವಿಭಾಗದ ಪ್ರಾಧ್ಯಾ ಪಕ ಮತ್ತು ಮುಖ್ಯಸ್ಥ ಡಾ.ನವೀನ್ ಉಪಸ್ಥಿತರಿದ್ದರು.

ಆಸ್ಪತ್ರೆ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಐಶ್ವರ್ಯ ಟಿ.ಆರ್. ಸ್ವಾಗತಿಸಿದರು. ತುರ್ತು ಚಿಕಿತ್ಸಾ ವಿಭಾ ಗದ ಸಹ ಪ್ರಾಧ್ಯಾಪಕಿ ಡಾ.ಪೃಥ್ವಿಶ್ರಿ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ರಚನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News