ಹಿಜಾವೇ ಮುಖಂಡ ಉಮೇಶ್ ನಾಯ್ಕ್ ಹೇಳಿಕೆಗೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡನೆ

Update: 2024-10-13 12:10 GMT

ಉಡುಪಿ, ಅ.13: ದಲಿತರು ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ಉಡುಪಿಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ಹಿಂದೂ ಜಾಗರಣ ವೇದಿಕೆಯ ಮುಖಂಡ ಉಮೇಶ್ ನಾಯ್ಕ್ ಕ್ರಮವನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಈ ದೇಶಕ್ಕೆ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಕೊಟ್ಟಿರುವ ಮಹಾನ್ ಚಿಂತಕ ಮತ್ತು ನಮ್ಮ ದೇಶದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಹಿಂದೂ ಜಾಗರಣ ವೇದಿಕೆಯ ನಾಯಕ ಈ ರೀತಿಯ ಅವಹೇಳ ನಕಾರಿ ಹೇಳಿಕೆ ಕೊಟ್ಟಿರುವುದು ಆ ಸಂಘಟನೆ ಹಾಗೂ ಅದರ ಸಹೋದರ ಸಂಘಟನೆಗಳ ಮತಾಂಧ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಇಂದು ನಡೆದ ಒಕ್ಕೂಟದ ಪದಾಧಿಕಾರಿಗಳ ಸಭೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಜಗತ್ತೇ ಗೌರವಿಸುತ್ತದೆ. ಅವರಂತಹ ಮೇಧಾವಿಯನ್ನು ಅತ್ಯಂತ ಅವಹೇಳನ ಮಾಡುವ ಮನಸ್ಥಿತಿ ನಮ್ಮ ಸಮಾಜಕ್ಕೆ, ದೇಶಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ಜನರು ಚಿಂತಿಸಬೇಕಿದೆ. ಇದನ್ನು ಎಲ್ಲರೂ ಒಕ್ಕೊರಳಿನಿಂದ ಖಂಡಿಸಬೇಕಿದೆ. ಅಂಬೇಡ್ಕರ್ ಭಾವಚಿತ್ರವನ್ನು ಸಹಿಸದವರು ಅಂಬೇಡ್ಕರ್ ಈ ದೇಶಕ್ಕೆ ಕೊಟ್ಟಿರುವ, ಕಲಿಸಿರುವ ವಿಶ್ವಮಾನ್ಯ ಮೌಲ್ಯಗಳನ್ನೂ ಸಹಿಸುವುದಿಲ್ಲ. ಅವರು ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟಿರುವ ಶ್ರೇಷ್ಠ ಸಂವಿಧಾನವನ್ನೂ ಗೌರವಿಸುವುದಿಲ್ಲ, ಸಹಿಸುವುದಿಲ್ಲ ಎಂಬುದು ಅತ್ಯಂತ ಸ್ಪಷ್ಟ. ಇಂತಹವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಆಗಬೇಕಿದೆ. ಉಳಿದ ಇದೇ ಮತಾಂಧ ಮನೋಭಾವದ ಎಲ್ಲರಿಗೂ ಇದೊಂದು ಪಾಠವಾಗ ಬೇಕಾಗಿದೆ ಎಂದು ಒಕ್ಕೂಟ ಹೇಳಿದೆ.

ಮಾನವ ಹಕ್ಕುಗಳ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿ ಬಂದ ವೇಳೆ ಅವರನ್ನು ರಾಜ್ಯದ ವಿಜಯಪುರದಲ್ಲಿ ಹೂವಿನ ಹಾರ ಹಾಕಿ ಸ್ವಾಗತಿಸಿ, ಸನ್ಮಾನ ಮಾಡಿರುವ ಘಟನೆ ವರದಿಯಾಗಿದ್ದು, ಇದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಒಕ್ಕೂಟ ತಿಳಿಸಿದೆ.

ಈ ನಾಡು ಕಂಡ ಅತ್ಯಂತ ದಿಟ್ಟ ಪತ್ರಕರ್ತೆ, ಮಾನವ ಹಕ್ಕುಗಳ ಹೋರಾಟಗಾರ್ತಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವ ಗಂಭೀರ ಆರೋಪ ಹೊತ್ತವರು ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಅವರನ್ನು ಮಹಾನ್ ಸಾಧನೆ ಮಾಡಿರುವ ಹೀರೋಗಳಂತೆ ಸ್ವೀಕರಿಸಿ, ಸ್ವಾಗತಿಸಿ, ಸನ್ಮಾನಿಸಿರುವುದು ನಾಚಿಕಗೇಡಿನ ಸಂಗತಿಯಾಗಿದೆ. ಇಂತಹ ಕೃತ್ಯ ಎಸಗಿರುವ ಸಂಘಟನೆ ಹಾಗೂ ಅದರ ಪ್ರತಿಯೊಬ್ಬ ಮುಖಂಡರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗಬೇಕು. ಅವರಿಗೂ ಕೊಲೆ ಆರೋಪಿಗಳಿಗೂ ಏನು ನಂಟಿದೆ ಎಂದು ತನಿಖೆ ಆಗಬೇಕಿದೆ ಎಂದು ಒಕ್ಕೂಟ ಪ್ರಕಟಣೆಯಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News