ವಿವಿಧ ಪಕ್ಷಗಳ ಸರಕಾರಗಳಿಂದ ನಾರಾಯಣ ಗುರುಗಳ ನಿಗಮದ ನಿರ್ಲಕ್ಷ್ಯ: ಅಶೋಕ್ ಪೂಜಾರಿ ಆರೋಪ

Update: 2024-10-13 13:47 GMT

ಕುಂದಾಪುರ, ಅ.13: ನಾಲ್ಕು ಜಿಲ್ಲೆಯಲ್ಲಿ ಬಿಲ್ಲವ ಸಮುದಾಯ ದೊಡ್ಡ ಸಂಖ್ಯೆಯಲ್ಲಿದ್ದರೂ ಕೂಡ ಜನಸಂಖ್ಯೆಗನುಗುಣ ವಾಗಿ ಸರಕಾರ ಮಟ್ಟದಲ್ಲಿ ಅಧಿಕಾರಿಗಳಿಗಿಲ್ಲ. ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಸಮುದಾಯ ಮುಂದೆ ಬರಬೇಕಾದರೆ ಸರಕಾರದ ಆಯಕಟ್ಟಿನ ಹುದ್ದೆಯ ಸ್ಥಾನಕ್ಕೇರಬೇಕು. ಈ ನಿಟ್ಟಿನಲ್ಲಿ ಸಮಾಜದ ಸಂಘಟನೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಉನ್ನತ ಹುದ್ದೆ ಪಡೆಯುವಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಕುಂದಾಪುರ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಹೇಳಿದ್ದಾರೆ.

ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಬೆಳ್ವೆ ವತಿಯಿಂದ ಕೆರ್ಜಾಡಿ ಶ್ರೀಬ್ರಹ್ಮಬೈದರ್ಕಳ ಗರಡಿಯಲ್ಲಿ ರವಿವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿಯವರ 170ನೇ ಜನ್ಮ ದಿನಾಚರಣೆ ಅಂಗವಾಗಿ ಗುರುಪೂಜೆ ಹಾಗೂ ಸಭಾ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಚುನಾವಣೆ ಸಂದರ್ಭ ಮಾತ್ರವೇ ನಾರಾಯಣ ಗುರುಗಳು ನೆನಪಾಗುತ್ತಾರೆ. ಕೆಲವು ವರ್ಷಗಳಿಂದ ಬೇರೆಬೇರೆ ಪಕ್ಷ ಅಧಿಕಾರ ಬಂದಾಗಲೂ ನಾರಾಯಣ ಗುರುಗಳ ನಿಗಮಕ್ಕೆ ನೀಡಿದ ಅನುದಾನ ಶೂನ್ಯ. ಬಿಲ್ಲವ ಸಮಾಜ ಕಟ್ಟುವ ಕೆಲಸ ಮಾಡುವ ಮುಂಚೂಣಿ ನಾಯಕರನ್ನು ಕಡೆಗಣಿಸುವ ಜೊತೆಗೆ ಸಮಾಜ ಒಡೆಯುವ ಕೆಲಸವಾಗುತ್ತಿದೆ. ಈ ಅನ್ಯಾಯವನ್ನು ಪ್ರಬಲವಾಗಿ ಖಂಡಿಸ ಬೇಕಾಗಿದೆ. ಸಮಾಜದಲ್ಲಿ ಸಂಘಟನೆಯಿದ್ದರೆ ಮಾತ್ರ ಯಶಸ್ಸು ಸಾಧ್ಯ. ಕುಂದಾಪುರ ಬಿಲ್ಲವ ಸಂಘ ದಿಂದ ತಾಲೂಕಿನ ಪ್ರತಿ ಗ್ರಾಮದ ಸಮುದಾಯದ ಜನಸಂಖ್ಯೆ, ವಿದ್ಯಾರ್ಥಿಗಳು, ಅವಿದ್ಯಾವಂತರು, ಉದ್ಯೋಗದ ಮಾಹಿತಿ ವಿವರ ಸಂಗ್ರಹಿಸುವ ಚಿಂತನೆ ಮಾಡಲಾಗುತ್ತಿದೆ ಎಂದರು.

ತರಬೇತುದಾರ ದರ್ಶನ್ ಗರ್ತಿಕೆರೆ, ಗುರುತತ್ವ ಸಂದೇಶ ನೀಡಿ, ಶ್ರೀನಾರಾ ಯಣ ಗುರುಗಳು ಒಂದು ಸಮಾಜಕ್ಕೆ ಸೀಮಿತವಾಗಿರದೆ ಇಡೀ ರಾಷ್ಟ್ರ, ವಿಶ್ವಕ್ಕೆ ಮಾದರಿಯಾಗಿದ್ದು ಲೌಕಿಕವಾಗಿ, ಧಾರ್ಮಿಕವಾಗಿ ಸಮಾಜ ಕಟ್ಟುವ ಕಾರ್ಯದಲ್ಲಿ ವಿಶ್ವಗುರುವಾಗಿದ್ದಾರೆ. ಶಿಕ್ಷಣ, ಅರಿವು, ಸಂಘಟನೆ, ಅಸ್ಪ್ರಶ್ಯತೆ ವಿರೋಧ, ಸ್ತ್ರೀ ಗೌರವಕ್ಕೆ ಕರೆಕೊಟ್ಟ ಗುರುಗಳ ತತ್ವಗಳು ಸಂವಿಧಾನದಲ್ಲಿಯೂ ಅಡಕಾವಗಿದೆ ಎಂದು ತಿಳಿಸಿದರು.

ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಬೆಳ್ವೆ ವಲಯದ ಅಧ್ಯಕ್ಷ ರಾಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಕುಂದಾಪುರ ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಸಹಿತ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ನ್ಯಾಯವಾದಿ ವಿ.ಸುರೇಶ್ ಪೂಜಾರಿ ಕಾರ್ಕಳ, ಕೆರ್ಜಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಪ್ರಧಾನ ಅರ್ಚಕ ದಗಾನಂದ ಪೂಜಾರಿ, ಬಿಲ್ಲವ ಸಂಘ ಬೆಳ್ವೆಯ ಪ್ರಧಾನ ಕಾರ್ಯದರ್ಶಿ ಉದಯ ಪೂಜಾರಿ ಶಾಂದ್ರಬೆಟ್ಟು ಮೊದಲಾದವರು ಉಪಸ್ಥಿ ತರಿದ್ದರು. ಪ್ರವೀಣ್ ಪೂಜಾರಿ ಸ್ವಾಗತಿಸಿದರು. ಸಂತೋಷ್ ಕುಮಾರ್ ನಿರೂಪಿಸಿ, ಸುಧಾಕರ ಪೂಜಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News