ಬಾಂಗ್ಲಾ ಅಕ್ರಮ ವಲಸಿಗರ ಬಂಧನ ಪ್ರಕರಣ:‌ ಹೆಚ್ಟಿನ ತನಿಖೆಗಾಗಿ ಆರೋಪಿಗಳಿಗೆ ಪೊಲೀಸ್ ಕಸ್ಟಡಿ ಸಾಧ್ಯತೆ

Update: 2024-10-13 15:05 GMT

ಉಡುಪಿ, ಅ.13: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿತರಾದ ಏಳು ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಅ.11ರಂದು ರಾತ್ರಿ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ ಬಾಂಗ್ಲಾದೇಶದ ಹಕೀಮ್ ಅಲಿ, ಸುಜೋನ್ ಎಸ್.ಕೆ. ಫಾರೂಕ್, ಇಸ್ಮಾಯಿಲ್ ಎಸ್.ಕೆ., ಕರೀಮ್ ಎಸ್.ಕೆ., ಸಲಾಂ ಎಸ್.ಕೆ., ರಾಜಿಕುಲ್ ಎಸ್.ಕೆ.,ಸೋಜಿಬ್ ಎಂಬವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದರು.

ಬಳಿಕ ಪೊಲೀಸರು ಎಲ್ಲ ಆರೋಪಿಗಳನ್ನು ಶನಿವಾರ ಉಡುಪಿ ನ್ಯಾಯಾ ಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಇವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇವರಿಗೆ ಸಿಕ್ಕಿಂ ರಾಜ್ಯದ ಕಾಜೋಲ್ ನಕಲಿ ಆಧಾರ್ ಕಾರ್ಡ್ ತಯಾರಿಸಿಕೊಟ್ಟಿದ್ದು, ಬಾಂಗ್ಲಾದೇಶದ ಉಸ್ಮಾನ್ ಎಂಬಾತ ಇವರನ್ನು ಅಕ್ರಮವಾಗಿ ಭಾರತಕ್ಕೆ ಕೆಲಸಕ್ಕಾಗಿ ಕರೆತಂದಿರುವುದಾಗಿ ತನಿಖೆ ಯಿಂದ ತಿಳಿದು ಬಂದಿದೆ.

ಇದೀಗ ಪೊಲೀಸರು, ಈ ಅಕ್ರಮ ವಲಸಿಗರಿಗೆ ಎಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಠಿಸಿ ನೀಡಲಾಗಿದೆ ಮತ್ತು ಇವರೆಲ್ಲ ಯಾವ ಮಾರ್ಗದಿಂದ ಉಡುಪಿಗೆ ಆಗಮಿಸಿದ್ದಾರೆ ಹಾಗೂ ಇವರಂತೆ ಇನ್ನೂ ವಲಸಿಗರು ಇದ್ದಾರೆಯೇ ಎಂಬುದುರ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ಏಳು ಮಂದಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಮನವಿ ಮಾಡಲಿದ್ದಾರೆ. ಆರೋಪಿಗಳಿಂದ ಹೆಚ್ಚಿನ ಮಾಹಿತಿಗಾಗಿ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.

ತನಿಖಾಧಿಕಾರಿಯಾಗಿ ಮಲ್ಪೆ ಸಿಪಿಐ

ಅಕ್ರಮ ಬಾಂಗ್ಲಾ ವಲಸಿಗರ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಅವರನ್ನು ಪ್ರಕರಣದ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ.

ಈ ಪ್ರಕರಣವನ್ನು ಮಲ್ಪೆ ಎಸ್ಸೈ ಪ್ರವೀಣ್ ಕುಮಾರ್ ಬೇಧಿಸಿದ್ದು, ಪ್ರಕರಣದ ದೂರುದಾರರು ಕೂಡ ಅವರೇ ಆಗಿದ್ದಾರೆ. ಇದೀಗ ಈ ಪ್ರಕರಣವನ್ನು ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರಿಗೆ ಹಸ್ತಾಂತರಿಸಿದ್ದಾರೆ. ಇನ್ನು ಈ ಪ್ರಕರಣದ ತನಿಖೆ ಯನ್ನು ಇವರು ಮುಂದುವರೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News