ಗ್ರಂಥಾಲಯ ಸಪ್ತಾಹ: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗೆ ಚಾಲನೆ
ಉಡುಪಿ : ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹ-೨೦೨೪ರ ಅಂಗವಾಗಿ ಇಂದು ಅಜ್ಜರಕಾಡಿನಲ್ಲಿರುವ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ಜರಗಿದವು.
ಮುಖ್ಯ ಶಾಖಾ ಗ್ರಂಥಾಲಯದಲ್ಲಿ ಸ್ಫರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಕ್ಕಳು ಪಠ್ಯ ಪುಸ್ತಕಗಳೊಂದಿಗೆ ಪಠ್ಯೇತರ ಪುಸ್ತಕಗಳನ್ನು ಓದುವ ಪ್ರವೃತ್ತಿ ಯನ್ನೂ ಬೆಳೆಸಿಕೊಳ್ಳ ಬೇಕು. ಗ್ರಂಥಾಲಯದಲ್ಲಿ ಇಂತಹ ಚಟುವಟಿಕೆಗಳನ್ನು ಏರ್ಪಡಿಸಿರುವುದು ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಕುರಿತು ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದರು.
ಸಾಹಿತಿ ಹಾಗೂ ಶಾರದ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಾನ್‌ಸನ್ ಮಾತನಾಡಿ, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ವಿದ್ಯಾರ್ಥಿಗಳು ಪುಸ್ತಕದ ಜೊತೆ ಗೆಳೆತನ ಮಾಡಬೇಕು.ಓದುವ ಹವ್ಯಾಸವನ್ನು ಮಕ್ಕಳು ರೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗಿರಿಜಾ ಹೆಗ್ಡೆ ಗಾವಂಕರ್ ಮಾತನಾಡಿ, ಬಾಲ್ಯದಿಂದಲೇ ಮಕ್ಕಳು ಕಥೆ ಗಳನ್ನು ಓದಬೇಕು. ಮುಂದೆ ಓದುವ ಹವ್ಯಾಸ ದಿಂದ ಕಥೆಗಳನ್ನು ಬರೆಯುವ ಪ್ರವೃತ್ತಿ ಬೆಳೆಯುತ್ತದೆ. ಜ್ಞಾನ ದೇಗುಲವಾದ ಈ ಗ್ರಂಥಾಲಯ ಮಕ್ಕಳ ಮುಂದಿನ ಭವಿಷ್ಯ ರೂಪಿಸುವ ವೇದಿಕೆಯಾಗಲಿ ಎಂದರು.
75ಕ್ಕಿಂತ ಅಧಿಕ ಮಕ್ಕಳು ಸ್ಪರ್ದೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ದಲ್ಲಿ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಪಾಲಕಿ ರಂಜಿತ ಕಾರ್ಯಕ್ರಮ ನಿರೂಪಿಸಿದರೆ, ಶಕುಂತಳಾ ಕುಂದರ್ ವಂದಿಸಿದರು.