ಆವೆ ಮಣ್ಣಿನ ಸಮಸ್ಯೆ ಶೀಘ್ರವೇ ಪರಿಹರಿಸಿ: ವಿ.ನರಸಿಂಹ ಆಗ್ರಹ

Update: 2025-03-18 21:33 IST
ಆವೆ ಮಣ್ಣಿನ ಸಮಸ್ಯೆ ಶೀಘ್ರವೇ ಪರಿಹರಿಸಿ: ವಿ.ನರಸಿಂಹ ಆಗ್ರಹ
  • whatsapp icon

ಕುಂದಾಪುರ, ಮಾ.18: ಸರಕಾರದ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ಜೇಡಿಮಣ್ಣನ್ನು ತೆಗೆಯಲು ನಿರ್ಬಂಧ ಹೇರಲಾಗಿದೆ. ಹೆಂಚು ಉದ್ಯಮಕ್ಕೆ ಅವಶ್ಯವಿರುವ ಆವೆಮಣ್ಣಿನ ಸಮಸ್ಯೆಯನ್ನು ಸರಕಾರ ಶೀಘ್ರವೇ ಪರಿಹಾರ ಮಾಡಬೇಕು ಎಂದು ಉಡುಪಿ ಜಿಲ್ಲಾ ಹೆಂಚು ಕಾರ್ಮಿಕ ಸಂಘದ ಅಧ್ಯಕ್ಷ ವಿ.ನರಸಿಂಹ ಒತ್ತಾಯಿಸಿದ್ದಾರೆ.

ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘ(ಸಿಐಟಿಯು) ಕುಂದಾಪುರ ವತಿಯಿಂದ ಹೆಂಚು ಉದ್ಯಮಕ್ಕೆ ಬೇಕಾದ ಆವೆಮಣ್ಣನ್ನು ತೆಗೆಯಲು ಎದುರಾಗುತ್ತಿರುವ ಸಮಸ್ಯೆಯನ್ನು ವಿರೋಧಿಸಿ ಕುಂದಾಪುರ ಶಾಸ್ತ್ರೀ ಸರ್ಕಲ್‌ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಬ್ರಿಟಿಷ್ ಕಾಲದಿಂದಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಂಚು ಉದ್ಯಮ ಸಾಕಷ್ಟು ಜನರಿಗೆ ಉದ್ಯೋಗವನ್ನು ಕೊಟ್ಟಿದೆ. ದ.ಕ ಜಿಲ್ಲ್ಲೆಯಲ್ಲಿದ್ದ ಸುಮಾರು 40 ಕಾರ್ಖಾನೆಗಳು ಬಂದ್ ಆಗಿ ಇದೀಗ ಬೆರಳೆಣಿಕೆಯ ಕಾರ್ಖಾನೆಗಳು ಕಾರ್ಯಾಚರಿಸುತ್ತಿವೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 17 ಕಾರ್ಖಾನೆಗಳಿದ್ದು, ಇದೀಗ ಹತ್ತಕ್ಕೆ ಇಳಿದಿದೆ. ಆವೆಮಣ್ಣಿನ ಸಮಸ್ಯೆಯಿಂದಾಗಿ ಈಗ ಇರುವ ಹತ್ತು ಕಾರ್ಖಾನೆಗಳು ಕೂಡ ಮುಚ್ಚುವಂತಹ ಪರಿಸ್ಥಿತಿ ತಲೆದೋರಿದೆ ಎಂದರು.

ಹಿಂದೆ ಖಾಸಗಿ ಜಾಗದಲ್ಲಿ ಗುತ್ತಿಗೆದಾರರು ಮಣ್ಣನ್ನು ಖರೀದಿ ಮಾಡಿ ಜೇಡಿಮಣ್ಣ(ಕೊಜೆಮಣ್ಣು) ನ್ನು ಮಾರಾಟ ಮಾಡಲಾಗುತ್ತಿತ್ತು. ಸ್ವಾತಂತ್ರ್ಯ ಪೂರ್ವದಿಂದಲೂ ಇದೇ ರೀತಿಯ ಪ್ರಕ್ರಿಯೆಗಳು ನಡೆದು ಬಂದಿದೆ. ಆದರೆ ಇತ್ತೀಚೆಗೆ 4-5 ವರ್ಷಗಳಿಂದ ಗಣಿ ಇಲಾಖೆಯ ಅವೈಜ್ಞಾನಿಕ ನೀತಿ ಯಿಂದಾಗಿ ಜೇಡಿ ಮಣ್ಣು ತೆಗೆಯಲು ಸಾಕಷ್ಟು ಸಮಸ್ಯೆಗಳಾಗುತ್ತಿವೆ ಎಂದು ಅವರು ದೂರಿದರು.

ಹಂಚು ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್. ನರಸಿಂಹ ಮಾತನಾಡಿ, ಹಂಚು ಉದ್ಯಮಕ್ಕೆ ಆವೆಮಣ್ಣು ತೀವ್ರ ಕೊರತೆಯಾಗುತ್ತಿದೆ. ಜೇಡಿಮಣ್ಣಿನ ಸರಬರಾಜಿಗೆ ಬೇಕಾಗಿರುವ ತೊಡಕುಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿವಾರಣೆ ಮಾಡದಿದ್ದರೆ ಗಂಭೀರ ಪರಿಸ್ಥಿತಿ ತಲೆದೋರಲಿದೆ. ಈ ಸಮಸ್ಯೆ ಪರಿಹಾರ ಆಗದೇ ಇದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಾಸ್ತ್ರೀವೃತ್ತದಿಂದ ಆರಂಭಗೊಂಡ ಕಾರ್ಮಿಕರ ಬೃಹತ್ ಮೆರವಣಿಗೆ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಪ್ರಜಾಸೌಧಕ್ಕೆ ತೆರಳಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರಿಗೆ ಮನವಿ ಸಲ್ಲಿಸಲಾಯಿತು. ಬಳಿಕ ಮತ್ತೆ ಮೆರವಣಿಗೆ ಮೂಲಕ ಶಾಸ್ತ್ರೀವೃತ್ತಕ್ಕೆ ಆಗಮಿಸಿ ಅಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ.ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ, ಪ್ರಮುಖರಾದ ಸುರೇಂದ್ರ ಎಚ್., ಜಿ.ಡಿ.ಪಂಜು ಪೂಜಾರಿ, ಪ್ರಕಾಶ್ ಕೋಣಿ, ಚಂದ್ರ ಗ್ರೀನ್ ಲ್ಯಾಂಡ್ ಮೊದಲಾದವರಿದ್ದರು.

‘ಸರಕಾರ ಅವೈಜ್ಞಾನಿಕ ನೀತಿಗಳಿಂದಾಗಿ ಕರಾವಳಿಯ ಜೀವನಾಡಿಯಾಗಿದ್ದ ಹಂಚು ಕೈಗಾರಿಕೋದ್ಯಮ ಇಂದು ಮುಚ್ಚುವ ಸ್ಥಿತಿಗೆ ಬಂದು ತಲುಪಿರುವುದು ದುರಂತ. ವಾರದೊಳಗೆ ಅವೈಜ್ಞಾನಿಕ ನೀತಿ ಸರಿಪಡಿಸಿ ಆವೆಮಣ್ಣು ತೆಗೆಯಲು ಸರಕಾರ ಅವಕಾಶ ಮಾಡಿಕೊಡಬೇಕು. ಇದು ಕಾರ್ಮಿಕರ ಬದುಕಿನ ಪ್ರಶ್ನೆ. ಸರಕಾರ ಮಧ್ಯಪ್ರವೇಶ ಮಾಡದಿದ್ದಲ್ಲಿ ಕಾರ್ಖಾನೆಗಳು ಮುಚ್ಚಿ ಕುಂದಾಪುರ ಸರಿಸುಮಾರು 6,000 ಕ್ಕೂ ಮಿಕ್ಕಿ ಕಾರ್ಮಿಕರ ಕುಟುಂಬಗಳು ಬೀದಿಗೆ ಬೀಳಲಿವೆ’

-ವಿ.ನರಸಿಂಹ, ಅಧ್ಯಕ್ಷರು, ಉಡುಪಿ ಜಿಲ್ಲಾ ಹೆಂಚು ಕಾರ್ಮಿಕ ಸಂಘ



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News