ಪ್ರಧಾನಿ ಮೋದಿಯಿಂದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಉದ್ಘಾಟನೆ!

ಉಡುಪಿ, ಎ.1: ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನಾ ಮೆರವಣಿಗೆ ಹಾಗೂ ಏಪ್ರಿಲ್ ಫೂಲ್ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಯಿತು.
ಕಲ್ಸಂಕ ಜಂಕ್ಷನ್‌ನಲ್ಲಿ ಸಮಿತಿಯ ಪ್ರಧಾನ ಸಂಚಾಲಕ ಅಮೃತ್ ಶೆಣೈ ಹಾಗೂ ಸಾಮಾಜಿಕ ಕಾರ್ಯ ಕರ್ತ ಅನ್ಸಾರ್ ಅಹ್ಮದ್ ಕೇಶ ಮುಂಡನ ಮಾಡಿಸಿದರು. ಬಳಿಕ ಎಲ್ಲ ಪ್ರತಿಭಟನಕಾರರ ಕಿವಿ ಮೇಲೆ ಹೂವನ್ನು ಇಡಲಾಯಿತು. ಭಿಕ್ಷುಕನ ವೇಷ ಧರಿಸಿದ್ದ ಅನ್ಸಾರ್ ಅಹ್ಮದ್ ಕೈಯಲ್ಲಿದ್ದ ತಟ್ಟೆಗೆ ಹಣ ಹಾಕುವ ಮೂಲಕ ಮೆರವಣಿಗೆಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಚಾಲನೆ ನೀಡಿದರು.
ಕಲ್ಸಂಕದಿಂದ ಹೊರಟ ಮೆರವಣಿಗೆ ಕಡಿಯಾಳಿ, ಕುಂಜಿಬೆಟ್ಟು ಮಾರ್ಗವಾಗಿ ಇಂದ್ರಾಳಿ ಸೇತುವೆವರೆಗೆ ಸಾಗಿತು. ಮೆರವಣಿಗೆಯುದ್ದಕ್ಕೂ ಸೇತುವೆ ನಿರ್ಮಾಣಕ್ಕಾಗಿ ಭಿಕ್ಷಾಟನೆಯ ಮೂಲಕ ಹಣವನ್ನು ಸಂಗ್ರಹಿಸಲಾಯಿತು. ಇಂದ್ರಾಳಿಯಲ್ಲಿ ಪ್ರತಿಭಟನಾ ಸಭೆ ನಡೆಸಿ, ಕೇಂದ್ರ ಸರಕಾರದ ವೈಫಲ್ಯವನ್ನು ವಿರೋಧಿಸಲಾಯಿತು. ನಂತರ ಸೇತುವೆ ಉದ್ಘಾಟನೆಗೆ ಮುಖವಾಡ ಧರಿಸಿದ ಪ್ರಧಾನಿ ನರೇಂದ್ರ ಮೋದಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದ್ರಾಳಿಗೆ ಆಗಮಿಸಿದರು.
ಈ ವೇಳೆ ಮೆರವಣಿಗೆಯಲ್ಲಿ ಅನ್ಸಾರ್ ಅಹ್ಮದ್ ಸಂಗ್ರಹಿಸಿದ ಹಣವನ್ನು ಮೋದಿಯವರಿಗೆ ನೀಡುವ ಮೂಲಕ ಕೇಂದ್ರ ಸರಕಾರದ ವಿಳಂಬ ನೀತಿಯನ್ನು ಅಣಕಿಸಲಾಯಿತು.ನಂತರ ಮೋದಿ ಸೇತುವೆಯನ್ನು ಉದ್ಘಾಟಿಸುವ ಮೂಲಕ ಏಪ್ರಿಲ್ ಫೂಲ್ ಆಚರಿಸಲಾಯಿತು. ಕಳೆದ ಏಳೆಂಟು ವರ್ಷಗಳಿಂದ ಉಡುಪಿ ಜನತೆಯನ್ನು ಸಂಸದರು ಮೂರ್ಖರನ್ನಾಗಿ ಮಾಡಿರುವ ಬಗ್ಗೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿ ದರು. ಇದೇ ವೇಳೆ ಪ್ರತಿಭಟನಕಾರರು ಕೆಲವೊತ್ತು ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಕೇಂದ್ರ ಸರಕಾರ ಹಾಗೂ ಸಂಸದರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಭೆಯಲ್ಲಿ ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ವೆಲ್‌ಫೇರ್ ಪಾರ್ಟಿಯ ಉಡುಪಿ ಜಿಲ್ಲಾಧ್ಯಕ್ಷ ಇದ್ರಿಸ್ ಹೂಡೆ, ಸಮಿತಿಯ ಅಧ್ಯಕ್ಷ ಕೀರ್ತಿ ಶೆಟ್ಟಿ, ಪ್ರಧಾನ ಸಂಚಾಲಕ ಅಮೃತ್ ಶೆಣೈ, ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್, ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಹರಿಪ್ರಸಾದ್ ರೈ, ಮುಹಮ್ಮದ್ ಮೌಲಾ, ಸುರೇಶ್ ಕಲ್ಲಾಗರ್, ಎಂ.ಎ.ಗಫೂರ್, ಮಂಜುಳಾ ನಾಯಕ್, ಪ್ರೊ.ಸುರೇಂದ್ರನಾಥ್ ಕೊಕ್ಕರ್ಣೆ, ಉದ್ಯಾವರ ನಾಗೇಶ್ ಕುಮಾರ್, ದಿನೇಶ್ ಮೊಳಹಳ್ಳಿ, ಇಸ್ಮಾಯಿಲ್ ಆತ್ರಾಡಿ ಮೊದಲಾದವರು ಉಪಸ್ಥಿತರಿದ್ದರು.
‘ಇಲಾಖೆಗಳ ಮಧ್ಯೆ ಹೊಂದಾಣಿಕೆ ಕೊರತೆ’
ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ನಡುವಿನ ಹೊಂದಾಣಿಕೆ ಕೊರತೆಯಿಂದ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬ ವಾಗಿದೆ. ಈ ವಿಳಂಬದಿಂದಾಗಿ ನಿರ್ಮಾಣ ವೆಚ್ಚ ಕೂಡ ಜಾಸ್ತಿ ಯಾಗಿ ಸರಕಾರಕ್ಕೆ ದೊಡ್ಡ ನಷ್ಟವಾಗುತ್ತಿದೆ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಆರೋಪಿಸಿದ್ದಾರೆ.
ಈ ಎರಡು ಇಲಾಖೆಗಳ ಮಧ್ಯೆ ಹೊಂದಾಣಿಕೆ ಮೂಡಿಸುವ ಕಾರ್ಯವನ್ನು ನಮ್ಮ ಸಂಸದರು ಮಾಡ ಬೇಕಿತ್ತು. ಆದರೆ ಇವರು ಪ್ರತಿ ಬಾರಿಯೂ ಒಂದು ತಿಂಗಳ ಗಡುವು ನೀಡಿ ಕಾಮಗಾರಿ ಮುಗಿಸುವುದಾಗಿ ಸುಳ್ಳು ಭರವಸೆಯನ್ನು ನೀಡುತ್ತಿದ್ದಾರೆ. ಇದರಿಂದ ಅದೆಷ್ಟೋ ಮಂದಿ ಇಲ್ಲಿ ಜೀವ ಕಳೆದುಕೊಂಡಿದ್ದಾರೆ ಎಂದು ಅವರು ದೂರಿದರು.
‘ಇಂದ್ರಾಳಿ ಸೇತುವೆ ಕಾಮಗಾರಿ ವಿಳಂಬದಿಂದ ಅನೇಕ ಅಪಘಾತಗಳು ಸಂಭವಿಸಿ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೂ ಕೇಂದ್ರ ಸರಕಾರ ಕಿವುಡಾಗಿದೆ ಮತ್ತು ಕುರುಡು ಆಗಿದೆ. ನಮ್ಮ ಸಂಸದರು ಅಗತ್ಯವೇ ಇಲ್ಲದ ರೀತಿ ವರ್ತಿಸುತ್ತಿದ್ದಾರೆ. ಶೋಭಾ ಅವರ ಹಾದಿಯಲ್ಲಿಯೇ ಕೋಟ ಶ್ರೀನಿವಾಸ ಪೂಜಾರಿ ಕೂಡ ಸಾಗುತ್ತಿದ್ದಾರೆ. ಸರಕಾರದ ವಿರುದ್ಧ ನಮ್ಮ ಆಕ್ರೋಶ ವ್ಯಕ್ತಪಡಿಸಲು ಈ ಹೋರಾಟ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಅಸಹಾಯಕ ರಾಗಿರುವ ಸಂಸದರು, ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸಲಿ’
-ಅಮೃತ್ ಶೆಣೈ, ಪ್ರಧಾನ ಸಂಚಾಲಕರು, ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ

