ಖಾಸಗಿ ಬಸ್‌ಗಳ ಟಿಕೆಟ್ ದರ ಏರಿಕೆ ಕೈ ಬಿಡಲು ಸಿಐಟಿಯು ಆಗ್ರಹ

ಉಡುಪಿ, ಎ.8: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇತ್ತೀಚೆಗೆ ಟೋಲ್ ದರ, ಮೆಟ್ರೋ ದರ, ಡೀಸೆಲ್ ದರ ಹೆಚ್ಚಳ ಹಾಗೂ ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಅದರ ಮಧ್ಯೆ ಡೀಸೆಲ್ ದರ, ಟೋಲ್ ದರ ನೆಪದಲ್ಲಿ ಖಾಸಗಿ ಬಸ್ ದರ ಏರಿಕೆ ಮಾಡು ತ್ತಿರುವುದು ಖಂಡನೀಯ. ಈ ಕೂಡಲೇ ಟಿಕೆಟ್ ದರ ಹೆಚ್ಚಳ ಕುರಿತು ನಿರ್ಧಾರವನ್ನು ಕೈ ಬಿಡಬೇಕು ಎಂದು ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್(ಸಿಐಟಿಯು) ಆಗ್ರಹಿಸಿದೆ.
ಪ್ರತಿ ಬಾರಿಯೂ ಡೀಸೆಲ್ ಬೆಲೆ ಏರಿಕೆ ಯಾಗುವ ಸಂಧರ್ಭದಲ್ಲಿ ಖಾಸಗಿ ಬಸ್ ಮಾಲೀಕರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಮಾತಾನಾಡದೇ ಜನಸಾಮಾನ್ಯರ, ವಿದ್ಯಾರ್ಥಿಗಳ, ಕಾರ್ಮಿಕರ ಜೇಬಿಗೆ ಕತ್ತರಿ ಹಾಕುವುದು ಸರಿಯಲ್ಲ ಈಗಾಗಲೇ ಸರಕಾರಗಳ ದ್ವಂದ್ವ ನೀತಿಗಳಿಂದ ಜನ ಸಾಮಾನ್ಯರು, ಕಾರ್ಮಿಕರು, ಮಧ್ಯಮ ವರ್ಗದ ಜನರು ಕಷ್ಟಪಡುತ್ತಿದ್ದಾರೆ.
ಆರ್‌ಟಿಓ ಅಧಿಕಾರಿಗಳ ಗಮನಕ್ಕೂ ಬಾರದೆ, ಜಂಟಿ ಸಭೆಯು ನಡೆಸದೆ ಖಾಸಗಿ ಬಸ್ ಮಾಲೀಕರು ದರ ಹೆಚ್ಚಳ ಮಾಡುವುದು ಬಡ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಮಾಡಿದ ದ್ರೋಹ. ಈ ಕೂಡಲೇ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ದರ ಏರಿಕೆ ಪ್ರಸ್ತಾಪವನ್ನು ಕೈಬೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ವಿಭಾಗದ ಕಾರ್ಮಿಕರು, ವಿದ್ಯಾರ್ಥಿಗಳು, ಜನಸಾಮಾನ್ಯರು ಒಟ್ಟು ಸೇರಿ ತೀವ್ರವಾದ ಹೋರಾಟ ಮಾಡಲಾಗುವುದು ಎಂದು ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್.ಕಾಂಚನ್ ಒತ್ತಾಯಿಸಿದ್ದಾರೆ.