ಪಿಯುಸಿ ಪರೀಕ್ಷೆ: ದಿನಗೂಲಿ ತಾಯಿಯ ಶ್ರಮಕ್ಕೆ ಬೆಲೆ ತಂದ ಮಾನ್ಯ!
Update: 2025-04-08 20:19 IST

ಉಡುಪಿ, ಎ.8: ಮಂದಾರ್ತಿ ಶ್ರೀದುರ್ಗ ಪರಮೇಶ್ವರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಾನ್ಯ ಎಸ್.ಪೂಜಾರಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶೇ.95.16 ಅಂಕ ಪಡೆದು ವಿಶಿಷ್ಟ ಸಾಧನೆ ಮಾಡುವ ಮೂಲಕ ದಿನಗೂಲಿ ಕೆಲಸ ಮಾಡುವ ತನ್ನ ತಾಯಿಯ ಶ್ರಮಕ್ಕೆ ಬೆಲೆ ತಂದುಕೊಟ್ಟಿದ್ದಾರೆ.
ಮಾನ್ಯ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದು, ಆಕೆಯ ತಾಯಿ ವಿನೋದ ಗೇರು ಬೀಜ ಕಾರ್ಖಾನೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ದಿನಗೂಲಿಯನ್ನು ಮಾಡುತ್ತ ವಿನೋದ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಓದಿಸುತ್ತಿದ್ದಾರೆ. ಮಾನ್ಯ ಅವರ ಈ ಸಾಧನೆ ತಾಯಿ ವಿನೋದ ಹಾಗೂ ಶಿಕ್ಷಣ ಸಂಸ್ಥೆ ಹೆಮ್ಮೆ ಪಡುವಂತಾಗಿದೆ. ಯಾವುದೇ ಟ್ಯೂಷನ್‌ಗೆ ಹೋಗದೇ ಕಾಲೇಜು ಪ್ರಾಧ್ಯಾಪಕರ ಸಹಾಯ ಪಡೆದು, ತಾನೇ ಹಗಲು ಇರಳು ಶ್ರಮವಹಿಸಿ ಓದಿ ಉತ್ತಮ ಅಂಕ ಗಳಿಸಿರುವ ಮಾನ್ಯ ಸದ್ಯ ಮುಂದಿನ ಶಿಕ್ಷಣಕ್ಕಾಗಿ ಸಿ.ಎ. ಮಾಡಲು ಹೆಜ್ಜೆ ಇಟ್ಟಿದ್ದಾಳೆ.