ಬ್ರಹ್ಮಾವರಕ್ಕೆ ತಕ್ಷಣಕ್ಕೆ ಸರ್ವಿಸ್ ರಸ್ತೆ, ಫ್ಲೈಓವರ್‌ಗೆ ಅಂದಾಜುಪಟ್ಟಿ ತಯಾರಿಗೆ ಸೂಚನೆ: ಉಡುಪಿ ಜಿಲ್ಲಾಧಿಕಾರಿ

ಉಡುಪಿ: ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫ್ಲೈಓವರ್ ನಿರ್ಮಾಣ ಅನಿವಾರ್ಯವಾಗಿದ್ದು, ಇದಕ್ಕಾಗಿ ಅಂದಾಜುಪಟ್ಟಿಯನ್ನು ತಯಾರಿಸುವಂತೆ ಸೂಚನೆ ನೀಡಲಾಗಿದ್ದು, ತಕ್ಷಣಕ್ಕೆ ಮಹೇಶ್ ಆಸ್ಪತ್ರೆ ಯಿಂದ ಎಸ್‌ಎಂಎಸ್ ವಿದ್ಯಾಸಂಸ್ಥೆಯವರೆಗೆ ಎರಡೂ ಕಡೆಗಳಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲದಲ್ಲಿ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಬ್ರಹ್ಮಾವರದ ಆಕಾಶವಾಣಿ ಜಂಕ್ಷನ್‌ನಿಂದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜುವರೆಗೆ ಫ್ಲೈ ಓವರ್ ಅಥವಾ ಅಂಡರ್‌ಪಾಸ್ ನಿರ್ಮಿಸುವ ಕುರಿತು ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಕುಂದುಕೊರತೆಗಳ ಕುರಿತು ಚರ್ಚಿಸುವ ಸಲುವಾಗಿ ಆಯೋಜಿ ಸಲಾದ ಸಭೆಯಲ್ಲಿ ಅವರು ಅಧಿಕಾರಿ ಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಬ್ರಹ್ಮಾವರ ರಾ.ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ ಹಾಗೂ ಜೀವಹಾನಿಯನ್ನು ತಪ್ಪಿಸಲು ಕೈಗೊಳ್ಳ ಬೇಕಾದ ಪರಿಹಾರೋಪಾಯಗಳ ಕುರಿತು ವರದಿ ನೀಡಲು ನೇಮಿಸಿದ ತಾಂತ್ರಿಕ ಸಮಿತಿ ನೀಡಿದ ವರದಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಬ್ರಹ್ಮಾವರದಲ್ಲಿ ಫ್ಲೈಓವರ್ ನಿರ್ಮಾಣ ಅನಿವಾರ್ಯವಾಗಿದೆ. ಈ ಬಗ್ಗೆ ಪರಿಶೀಲಿಸಿ ಅಂದಾಜು ಪಟ್ಟಿಯನ್ನು ತಯಾರಿಸಲು ಎನ್‌ಎಚ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಈ ವರದಿಯನ್ನು ಮುಂದಿನ ಕ್ರಮಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಲಾಗು ವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಆದರೆ ಬ್ರಹ್ಮಾವರದಲ್ಲಿ ತಕ್ಷಣಕ್ಕೆ ಪರಿಹಾರ ಕ್ರಮವಾಗಿ ಮಹೇಶ್ ಆಸ್ಪತ್ರೆ ಯಿಂದ ಎಸ್‌ಎಂಎಸ್‌ವರೆಗೆ ಎರಡೂ ಕಡೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಜಿಲ್ಲಾಧಿ ಕಾರಿ ತಿಳಿಸಿದರು. ಇದರೊಂದಿಗೆ ನೀರು ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡುವಂತೆಯೂ ಸೂಚಿಸಿದರು.
ಅಲ್ಲದೇ ಆಕಾಶವಾಣಿಯಿಂದ ಎಸ್‌ಎಂಎಸ್‌ವರೆಗೆ ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮಕೈಗೊಳ್ಳು ವಂತೆಯೂ ಸೂಚಿಸಲಾಯಿತು. ಈ ಬಗ್ಗೆ ಅಲ್ಲಿ ಫಲಕಗಳನ್ನು ಹಾಕಿ ವಾಹನ ಚಾಲಕರಿಗೆ ಸೂಚನೆಗಳನ್ನು ನೀಡಲು ಸಹ ಅವರು ನಿರ್ದೇಶನ ನೀಡಿದರು.
ಜಿಲ್ಲೆಯ ರಾ.ಹೆದ್ದಾರಿಯಲ್ಲಿ ಜನರ ಅಜಾಗರೂಕತೆ ಅಥವಾ ವಾಹನ ಚಾಲಕರ ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆುಂದ ರಸ್ತೆ ಅಪಘಾತಗಳು ಉಂಟಾಗುತ್ತಿವೆ. ಹೆಚ್ಚು ಜನನಿಬಿಡ ವ್ಯಾಪ್ತಿಯಲ್ಲಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್‌ಗಳ ಅವಶ್ಯಕತೆ ಇದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗಳು ಪರಿಶೀಲಿಸಿ, ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಬ್ರಹ್ಮಾವರ ಹಾಗೂ ತೆಕ್ಕಟ್ಟೆಯಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಲು ಯೋಜನೆ ರೂಪಿಸಿ, ಕೇಂದ್ರ ಸರಕಾರದ ಅನುಮತಿಗೆ ಸಲ್ಲಿಸುವಂತೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ನಿರ್ವಹಣೆ ಸರಿಯಾಗಿರದೇ ಮಳೆಯ ನೀರು ಎಲ್ಲೆಂದರಲ್ಲಿ ನುಗ್ಗಿ ಸಾರ್ವಜನಿಕ ರಿಗೆ ತೊಂದರೆ ಉಂಟುಮಾಡುತ್ತಿದೆ. ಈ ಬಗ್ಗೆ ಅನೇಕ ಬಾರಿ ಗುತ್ತಿಗೆದಾರರುಗಳಿಗೆ ಪತ್ರದ ಮುಖೇನ ತಿಳಿಸಿದ್ದರೂ ಯಾವುದೇ ರೀತಿಯಲ್ಲಿ ಸೂಕ್ತ ಸ್ಪಂದನೆ ಬರುವುದಿಲ್ಲ ಎಂಬ ದೂರುಗಳಿವೆ. ತಾಲೂಕಿನ ತಹಶೀಲ್ದಾರುಗಳು ತಮ್ಮ ಮ್ಯಾಜಿಸ್ಟ್ರಿಯಲ್ ಅಧಿಕಾರವನ್ನು ಚಲಾಯಿಸಿ, ಕಾನೂನು ಅಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯ ಅದ್ಯಕ್ಷತೆ ವಹಿಸಿದ್ದ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡ ಬೇಕು ಎಂದರು.
ಜಿಲ್ಲೆಯಲ್ಲಿ ಸುಮಾರು 100 ಕಿ.ಮೀ.ಗೂ ಹೆಚ್ಚು ಉದ್ದದ ರಾ.ಹೆದ್ದಾರಿ 66 ಹಾದು ಹೋಗಿದ್ದು, ಪೂರ್ಣ ಪ್ರಮಾಣ ದಲ್ಲಿ ಸರ್ವಿಸ್ ರಸ್ತೆ, ಮೂಲ ಭೂತ ಸೌಕರ್ಯಗಳಾದ ಚರಂಡಿ, ದಾರಿದೀಪ ಸೇರಿದಂತೆ ವಿವಿಧ ನಿರ್ವಹಣೆ ಕೊರತೆಯಿಂದ ಸುಗಮ ಸಂಚಾರಕ್ಕೆ ತೊಂದರೆಗಳಾಗುತಿದ್ದು, ಅಲ್ಲಲ್ಲಿ ಅಪಘಾತಗಳೂ ಉಂಟಾ ಗುತ್ತಿವೆ. ಇವುಗಳನ್ನು ತಪ್ಪಿಸಲು ಅಗತ್ಯವಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಭಿಯಂತರರಿಗೆ ಸೂಚನೆ ನೀಡಿದರು.
ಸಭೆಯಲ್ಲಿದ್ದ ಕೆಲವು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಬೇಕು. ಮಳೆಯ ನೀರು ಸರಾಗವಾಗಿ ಹೆದ್ದಾರಿ ರಸ್ತೆ ಬದಿಯ ಚರಂಡಿಗಳ ಮೂಲಕ ಹರಿದು ತೋಡುಗಳನ್ನು ಸೇರುವ ಹಾಗೆ ಸಂಪರ್ಕ ಕಲ್ಪಿಸ ಬೇಕು. ದಾರಿದೀಪ ಅಳವಡಿಕೆ, ಲಿಂಕ್ ರಸ್ತೆಗಳಿಗೆ ಡಾಂಬರೀಕರಣ, ಹೆದ್ದಾರಿ ನಿರ್ವಹಣೆಯ ಅಂಬುಲೆನ್ಸ್‌ಗಳು ಸಕಾಲದಲ್ಲಿ ಲಭ್ಯವಾಗಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ತಾಲೂಕುಗಳ ತಹಶೀಲ್ದಾರರು, ಇಓಗಳು, ಗ್ರಾಪಂ ಅಧ್ಯಕ್ಷರು, ಪಿಡಿಓಗಳು ಉಪಸ್ಥಿತರಿದ್ದರು.
