ಆಟಿಸಂ ಸ್ಟೆಕ್ಟ್ರವ್ ಡಿಸಾರ್ಡರ್ ಪತ್ತೆ ಮಾಡುವ ಯಂತ್ರದ ಅಭಿವೃದ್ಧಿ

ಉಡುಪಿ, ಎ.13: ಚಿಕ್ಕ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿ ಆಟಿಸಂ ಸೆಕ್ಟ್ರವ್ ಡಿಸಾರ್ಡರ್ ಕಾಯಿಲೆಯನ್ನು ಯಂತ್ರ ಕಲಿಕಾ ತಂತ್ರಜ್ಞಾನವನ್ನು ಬಳಸಿಕೊಂಡು ಪತ್ತೆ ಮಾಡುವ ಯಂತ್ರವನ್ನು ಬಂಟಕಲ್ ಇಂಜಿನಿಯರಿಂಗ್‌ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ.
ಆಟಿಸಂ ಸೆಕ್ಟ್ರವ್ ಡಿಸಾರ್ಡರ್ ಎಂಬುದು ನರಮಂಡಲದ ಬೆಳವಣಿಗೆ ಯಲ್ಲಿನ ನ್ಯೂನತೆಯಾಗಿದ್ದು ಅದು ಒಂದು ಮಗುವಿನ ನಡವಳಿಕೆ ಮತ್ತು ಸಾಮಾಜಿಕ ಸಂವಹನಗಳ ಮೇಲೆ ಪರಿಣಾಮ ಬೀರುತ್ತದೆ. ಈ ಯಂತ್ರದ ಮೂಲಕ ತಾಂತ್ರಿಕ ಅಧ್ಯಯನ ತಂತ್ರಗಳನ್ನು ಬಳಸಿಕೊಂಡು ಚಿಕ್ಕ ಮಕ್ಕಳಲ್ಲಿ ಮೊದಲ ಹಂತದ ಆಟಿಸಂನಂತಹ ಕಾಯಿಲೆಯನ್ನು ಪತ್ತೆ ಹಚ್ಚಿ ಸುಧಾರಿತ ಚಿಕಿತ್ಸೆ ನೀಡುವಲ್ಲಿ ಸಹಾಯಕವಾಗಿದೆ.
ಈ ಯೋಜನೆಯಿಂದ ಆಟಿಸಂ ಕಾಯಿಲೆಯನ್ನು ಪತ್ತೆ ಹಚ್ಚಲು ಲಾಸೋ ಎಂಬ ವೈಶಿಷ್ಠ್ಯ ಆಯ್ಕೆಯಂತಹ ತಂತ್ರಜ್ಞಾನಗಳನ್ನು ಬಳಸಿ ನಂತರ ಎಕ್ಸ್‌ಜಿ ಬೂಸ್ಟ್, ರಾಂಡವ್ ಪಾರೆಸ್ಟ್ ಮತ್ತು ಗ್ರೇಡಿಯಂಟ್ ಬೂಸ್ಟಿಂಗ್ ಮೂಲಕ ಕಾಯಿಲೆಯ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ತಂತ್ರಜ್ಞಾನವು ಒಟ್ಟರೆ ಶೇ.94.79 ನಿಖರತೆಯನ್ನು ಸಾಧಿಸುತ್ತದೆ. ಈ ಯಂತ್ರವು ಪೊಷಕರಿಗೆ ಮತ್ತು ಮಕ್ಕಳನ್ನು ಆರೈಕೆ ಮಾಡುವವರಿಗೆ ತುಂಬಾ ಸಹಾಯಕವಾಗಿದೆ.
ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿ ಸವಿತಾ ಶೆಣೈ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ರಮ್ಯಾ, ಶರಣ್ಯ, ಶ್ರೀಯಾ ಶೆಟ್ಟಿ ಮತ್ತು ವೈಷ್ಣವಿ ಬಿಜೂರ್ ಯೋಜನೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.