ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ: ಬೆಂಗಳೂರು ಕೆಎಲ್‌ಇ ಕಾನೂನು ಕಾಲೇಜು ಪ್ರಥಮ

ಉಡುಪಿ, ಎ.13: ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ನ್ಯಾಯವಾದಿ ಪಿ.ಶಿವಾಜಿ ಶೆಟ್ಟಿ ಸ್ಮಾರಕ 9ನೇ ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಬೆಂಗಳೂರಿನ ಕೆಎಲ್‌ಇ ಕಾನೂನು ಕಾಲೇಜು ಪ್ರಥಮ, ಬೆಂಗಳೂರಿನ ಸೌಂದರ್ಯ ಕಾನೂನು ಕಾಲೇಜು ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿತು.
ಉತ್ತಮ ತೀರ್ಪು ಬರಹ ಸ್ಪರ್ಧೆಯಲ್ಲಿ ಮೈಸೂರು ವಿದ್ಯಾವರ್ಧಕ ಕಾನೂನು ಕಾಲೇಜಿನ ವಿಭಾಲಿ ಎಸ್. ರಾಜ್ ಪ್ರಥಮ ಹಾಗೂ ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನ ಸ್ಫೂರ್ತಿ ಪಿ.ಇ. ದ್ವಿತೀಯ ಬಹುಮಾನ ಪಡೆದು ಕೊಂಡರು.
ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾ ಡಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ, ವಕೀಲ ವೃತ್ತಿಯು ಶಿಕ್ಷಣ ಆಯ್ಕೆ ಆಗಿರಬೇಕೇ ಹೊರತು ಅವಕಾಶ ಆಗಿರಬಾರದು. ಇದು ಸಮಾಜದ ಸೇವೆಗೆ ಇರುವ ವೃತ್ತಿಯಾಗಿದೆ. ವಕೀಲರು ಹಣ ಗಳಿಕೆಗೆ ಆದ್ಯತೆ ನೀಡಬಾರದು. ನೊಂದವರಿಗೆ ನ್ಯಾಯ ಕೊಡಿಸಲು ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.
ಮದ್ರಾಸ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ. ಪಿ.ಜ್ಯೋತಿಮಣಿ ಮಾತನಾಡಿ, ಇತ್ತೀಚೆಗೆ ಜನ ಕ್ಷುಲ್ಲಕ ಕಾರಣಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರುತ್ತಿದ್ದಾರೆ. ಇದರ ಪರಿಣಾಮ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಸಕಾಲಕ್ಕೆ ತೀರ್ಪು ದೊರೆಯಲು ಸಾಧ್ಯವಾಗುತ್ತಿಲ್ಲ. ಆದುದ ರಿಂದ ಜನರು ಭಾರತವೂ ಸೇರಿದಂತೆ ವಿಶ್ವದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ಪ್ರತಿವರ್ಷ 10 ಸಾವಿರಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗುತ್ತಿದ್ದರೂ 65ರಿಂದ 70 ಸಾವಿರ ಪ್ರಕರಣ ಇತ್ಯರ್ಥವಾಗದೇ ಬಾಕಿ ಉಳಿಯುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ನಿರ್ದೇಶಕಿ ಪ್ರೊ.ನಿರ್ಮಲಾ ಕುಮಾರಿ ಕೆ. ವಹಿಸಿದ್ದರು. ರಾಜ್ಯ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಪ್ರೊ.ಚಿದಾನಂದ ರೆಡ್ಡಿ ಎಸ್.ಪಾಟೀಲ, ಕಾಲೇಜಿನ ಪ್ರಾಂಶುಪಾಲ ಪ್ರೊ.ರಘುನಾಥ ಕೆ.ಎಸ್. ಉಪಸ್ಥಿತರಿದ್ದರು.
ಸ್ಪರ್ಧೆಯ ಸಂಯೋಜಕಿ ಸುರೇಖಾ ಕೆ. ವಿಜೇತರ ಪಟ್ಟಿ ವಾಚಿಸಿದರು. ಪ್ರೊ. ರೋಹಿತ್ ಅಮೀನ್ ಸ್ವಾಗತಿಸಿದರು. ವೈಷ್ಣವಿ ಎಂ. ಹಾಗೂ ರೋಸ್ ಥೆರೇಸಾ ಪೌಲ್ ಅತಿಥಿಗಳನ್ನು ಪರಿಚಯಿಸಿದರು. ಪಾರ್ವತಿ ಎ.ಆರ್. ಕಾರ್ಯಕ್ರಮ ನಿರೂಪಿಸಿದರು. ಡಾ.ಜಯಾ ಮೋಲ್ ವಂದಿಸಿದರು.