‘ಸದಾ ಎಚ್ಚರದಿಂದಿರಲು’ ಅಂಬೇಡ್ಕರ್ ಚಿಂತನೆ, ವಿಚಾರ ಸಹಾಯಕ: ಉಡುಪಿ ಡಿಸಿ ವಿದ್ಯಾಕುಮಾರಿ

ಉಡುಪಿ, ಎ.14: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಓದು, ಬರಹ, ಚಿಂತನೆ, ವಿಚಾರಗಳು ಸಾರ್ವಕಾಲಿಕವಾದ ಸತ್ಯ. ನಾವು ಎಚ್ಚರವಾ ಗಿಲ್ಲದೇ ಇದ್ದಾಗ ವಿಸ್ಮತಿಯಲ್ಲಿರಬೇಕಾಗುತ್ತದೆ. ಆದರೆ ಅಂಬೇಡ್ಕರ್ ಅವರ ಬರಹ, ಚಿಂತನೆ ಹಾಗೂ ವಿಚಾರಗಳು ‘ಸದಾ ಎಚ್ಚರದಿಂದಿರಲು’ ನಮಗೆ ಸಹಾಯಕವಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಪ.ಜಾತಿ ಮತ್ತು ಪ.ಪಂಗಡಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಭಾರತರತ್ನ, ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತಿದ್ದರು.
ಇಂದಿಗೂ ತನ್ನ ವಿದ್ವತ್‌ಗಾಗಿ ಜಗತ್ತಿನಾದ್ಯಂತ ಗೌರವ ಪಡೆಯುವ ಒಬ್ಬ ವ್ಯಕ್ತಿ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್. ಸಮಾಜದಲ್ಲಿ ಮಹಿಳೆಯರು ಇತರರಷ್ಟೇ ಸಮಾನವಾದ ಹಕ್ಕುಗಳನ್ನು ಪಡೆಯ ಬೇಕೆಂಬ ಉದ್ದೇಶದಿಂದ ಹಿಂದೂ ಕೋಡ್ ಬಿಲ್, ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕು, ವಿಚ್ಛೇದನದ ಹಕ್ಕು ಸೇರಿದಂತೆ ಕ್ರಾಂತಿಕಾರಕ ಹಕ್ಕುಗಳನ್ನು ರೂಪಿಸಿದವರು ಅವರು ಎಂದರು.
ಅಂಬೇಡ್ಕರ್ ಅವರ ಚಿಂತನೆಗಳು, ಪ್ರಜಾಸತ್ತಾತ್ಮಕ ಮೌಲ್ಯಗಳು ಜೀವಂತ ವಾಗಿ ಇರಬೇಕೆಂದರೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರಷ್ಟೇ ಸಾಲದು. ಅವರು ಬರೆದ ಪುಸ್ತಕಗಳನ್ನು ಓದಿ ಅರ್ಥೈಸಿಕೊಂಡು, ನಮ್ಮನ್ನು ನಾವು ಬದಲಾಯಿಸಿಕೊಂಡಾಗ ಮಾತ್ರ ಇದು ಸಾಧ್ಯ ಎಂದು ಡಾ.ವಿದ್ಯಾಕುಮಾರಿ ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಉಡುಪಿ ಶಾಸಕ ಯಶಪಾಲ್ ಎ.ಸುವರ್ಣ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆ, ವಿಚಾರಧಾರೆಗಳು ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿ ಕೊಳ್ಳುವಂತೆ ತಿಳಿಸಿದಲ್ಲದೇ, ವಿಶ್ವದ ಶೇ.20ರಷ್ಟು ಜನಸಂಖ್ಯೆ ಇರುವ ಭಾರತದ 144 ಕೋಟಿ ಜನರಿಗೆ ಸಮಾನತೆಯ ಮೂಲಕ ನ್ಯಾಯ ಒದಗಿಸಿ ಕೊಡುವ ಕಾರ್ಯವನ್ನು ಡಾ.ಅಂಬೇಡ್ಕರ್ ಜಾರಿಗೆ ತಂದ ಸಂವಿಧಾನದ ಮೂಲಕ ಸಾಧ್ಯವಾಗಿದೆ ಎಂದರು.
ಜಿಲ್ಲಾಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಡಾ.ಅಂಬೇಡ್ಕರ್ ಕಠಿಣ ಪರಿಶ್ರಮ, ಅಪಾರ ಜ್ಞಾನ, ಹೋರಾಟದಿಂದ ಇಡೀ ಜಗತ್ತಿಗೆ ಮಾದರಿಯಾಗು ವಂತಹ ಸಂವಿಧಾನವನ್ನು ಜಾರಿಗೆ ತಂದರು. ಈ ಸಂವಿಧಾನ, ಗೌರವಯುತವಾಗಿ ಬದುಕಲು ನಮಗೆ ಅವಕಾಶ ನೀಡಿದ್ದು, ಅದು ನಮಗೆ ದಾರಿದೀಪವಾಗಿದೆ ಎಂದರು.
ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಎಚ್. ವಿಶೇಷ ಉಪನ್ಯಾಸ ನೀಡಿ, ಬಾಬಾ ಸಾಹೇಬರು ಸಾಂವಿಧಾನಿಕವಾಗಿ ನೀಡಿದ ಸಮಾನ ಅವಕಾಶದಿಂದ ಎಲ್ಲ ವರ್ಗದವರಿಗೂ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಯಿತು ಎಂದು ವಿವರಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾ ಯಿತು. ಡಾ.ಬಾಬು ಜಗಜೀವನ್ ರಾಮ್ ನೆನಪಿನ 2025ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪ್ರಗತಿಪರ ಚಿಂತಕ ಜಯನ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಉಡುಪಿ ನಗರಸಭೆಯ ಹಿರಿಯ ಪೌರ ಕಾರ್ಮಿಕರಾದ ಸುರೇಶ್ ಹಾಗೂ ದಂಡ್ಯಮ್ಮರನ್ನು ಸಹ ಸನ್ಮಾನಿಸಲಾ ಯಿತು. ಅಂತರ್ಜಾತಿ ವಿವಾಹವಾದ ಜೋಡಿಗಳಿಗೆ ಗೌರವಧನದ ಚೆಕ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಹಾಗೂ ಪಿ. ಎ ಹೆಗಡೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಸ್ವಾಗತಿಸಿ, ವಂದಿಸಿದರೆ, ಶಿಕ್ಷಕ ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು. ಇದೇ ವೇಳೆ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ವರಿಂದ ಅಂಬೇಡ್ಕರ್ ಪುತ್ಥಳಿಯ ಬಳಿ ಬುದ್ಧ ವಂದನೆ ಕಾರ್ಯಕ್ರಮ ಜರಗಿಸಿದರು. ಗಣೇಶ್ ಬಾರ್ಕೂರು ತಂಡದಿಂದ ಡೋಲು, ಕೊಳಲು ವಾದನ, ವಾಸುದೇವ್ ಬನ್ನಂಜೆ ತಂಡದಿಂದ ಚಂಡೆ ವಾದನ, ಶಂಕರದಾಸ್ ಚೆಂಡ್ಕಳ ಜಾನಪದ ಕಲಾತಂಡದಿಂದ ಕ್ರಾಂತಿ ಗೀತೆ ಹಾಡಲಾಯಿತು.

