ತಳಸಮುದಾಯದ ಇತಿಹಾಸ ರಚನೆಯಾಗಿದ್ದೇ ಅಂಬೇಡ್ಕರ್ ಸಂವಿಧಾನ ರಚನೆಯ ಬಳಿಕ: ಶ್ರೇಯಸ್ ಕೋಟ್ಯಾನ್

Update: 2025-04-14 21:18 IST
ತಳಸಮುದಾಯದ ಇತಿಹಾಸ ರಚನೆಯಾಗಿದ್ದೇ ಅಂಬೇಡ್ಕರ್ ಸಂವಿಧಾನ ರಚನೆಯ ಬಳಿಕ: ಶ್ರೇಯಸ್ ಕೋಟ್ಯಾನ್
  • whatsapp icon

ಉಡುಪಿ, ಎ.14: ರಾಜ ಮಹಾರಾಜರ ಇತಿಹಾಸ ಇರುವ ಈ ದೇಶದಲ್ಲಿ ತಳ ಸಮುದಾಯಕ್ಕೆ, ದಲಿತ ರಿಗೆ ಯಾವುದೇ ಇತಿಹಾಸ ಇರಲಿಲ್ಲ. ಆ ಇತಿಹಾಸ ರಚನೆಯಾಗಿದ್ದೇ ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದ ಬಳಿಕ ಎಂದು ಸಂಶೋಧನಾ ವಿದ್ಯಾರ್ಥಿ, ಯುವ ಚಿಂತಕ ಶ್ರೇಯಸ್ ಜಿ. ಕೋಟ್ಯಾನ್ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಆಶ್ರಯದಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಭಾರತ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನೋತ್ಸವದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡುತಿದ್ದರು.

ನಮ್ಮ ದೇಶದಲ್ಲಿ ತಳ ಸಮುದಾಯವನ್ನು ಶೋಷಿಸಲು ಸೃಜನಾತ್ಮಕವಾದ ದಾರಿಯನ್ನು ಕಂಡು ಹಿಡಿಲಾ ಗಿತ್ತು. ಆ ಸಂದರ್ಭದಲ್ಲಿ ಅಂಬೇಡ್ಕರ್ ತಾನು ಇದರಿಂದ ಮುಕ್ತವಾಗಿ ತನ್ನ ಮಂದಿಯನ್ನು ಮುಕ್ತರಾಗಿಸಲು ಪ್ರಯತ್ನವನ್ನು ಮಾಡಿದರು.ಈಗ ಜಾತಿ-ಗೀತಿ ಇಲ್ಲ ಎಂದು ನಾವು ಮಾತಿನಲ್ಲಿ ಹೇಳುತ್ತೇವೆ. ಆದರೆ ಎಲ್ಲಾ ಕಡೆಗಳಲ್ಲಿ ಜಾತಿಯೇ ಮುಂಚೂಣಿಗೆ ಬರುತ್ತದೆ ಮತ್ತು ವಿಜೃಂಬಿಸುತ್ತದೆ. ಹೀಗಾಗಿ ಈ ಮಧ್ಯೆ ಬದುಕಲು ಅಂಬೇಡ್ಕರ್ ತತ್ವ ಮುಖ್ಯವಾಗುತ್ತದೆ ಎಂದರು.

ಬಸವಣ್ಣ ವೀರಶೈವರಿಗೆ, ಗೌತಮ ಬುದ್ಧ ಬೌದ್ಧರಿಗೆ, ನಾರಾಯಣ ಗುರುಗಳು ಬಿಲ್ಲವರಿಗೆ, ಅಂಬೇಡ್ಕರ್‌ ರನ್ನು ದಲಿತರಿಗೆ ಮಾತ್ರ ಸೀಮಿತ ಗೊಳಿಸಬಾರದು. ಅವರ ಚಿಂತನೆಗಳು ಎಲ್ಲರಿಗೂ ಎಲ್ಲಾ ಸಮಯ ದಲ್ಲಿಯೂ ದಕ್ಕುವಂತವುಗಳು. ಬೇರೆ ದೇಶದ ಸಂವಿಧಾನವನ್ನು ನಮ್ಮ ಸಂವಿಧಾನಕ್ಕೆ ಹೋಲಿಸಿದಾಗ ಭಾರತದ ಸಂವಿಧಾನದ ಶ್ರೇಷ್ಠತೆ ಅರಿವಾಗುತ್ತದೆ ಎಂದರು.

ಈ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದರೆ ಸಾಲದು. ಇಲ್ಲಿನ ಜನ ಸಾಮಾಜಿಕವಾಗಿ ಸ್ವಾತಂತ್ರ್ಯವನ್ನು ಪಡೆದಾಗ ಮಾತ್ರ ನಿಜವಾದ ಸ್ವಾತಂತ್ರ ದೊರಕುತ್ತದೆ ಎಂದು ಅಂಬೇಡ್ಕರ್ ನಂಬಿದ್ದರು. ಹೀಗಾಗಿ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿ-ನೆಹರು ಅಹಿಂಸಾ ಮಾರ್ಗದಲ್ಲಿ ಚಳವಳಿ ಮಾಡಿದರೆ, ಬೋಸ್, ಭಗತ್ ಸಿಂಗ್ ಕ್ರಾಂತಿಕಾರಿ ಮಾರ್ಗವನ್ನು ಅನುಸರಿಸಿದರು. ಆದರೆ ಅಂಬೇಡ್ಕರ್ ಸಾಮಾಜಿಕ ಕ್ರಾಂತಿಯ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು ಎಂದು ಶ್ರೇಯಸ್ ವಿವರಿಸಿದರು.

ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ, ಮಾಜಿ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆ, ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಪೂರ್ ಸಭೆಯನ್ನು ದ್ದೇಶಿಸಿ ಮಾತನಾಡಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಜಯ ಕುಮಾರ್ ಸ್ವಾಗತಿಸಿದರು. ಪರಿಶಿಷ್ಟ ಪಂಗಡ ಅಧ್ಯಕ್ಷ ಜಯರಾಮ್ ನಾಯ್ಕ್ ಸಂವಿಧಾನ ಪೀಠಿಕೆಯನ್ನು ವಾಚಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್ ಪುತ್ತೂರು ವಂದಿಸಿದರು. ಮಾಜಿ ಜಿಪಂ ಸದಸ್ಯ ಗೋಪಿ ಕೆ. ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕ ಕರ್ನೇಲಿಯೋ, ಜಿಪಂ ಮಾಜಿ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಜಿಲ್ಲಾ ಇಂಟೆಕ್ ಅಧ್ಯಕ್ಷ ಕಿರಣ್ ಹೆಗಡೆ, ಜಿಲ್ಲಾ ಸೇವಾದಳದ ಅಧ್ಯಕ್ಷ ಕಿಶೋರ್ ಎರ್ಮಾಳ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಕ್, ಕಿಸಾನ್‌ಸೆಲ್ ಅಧ್ಯಕ್ಷ ಎಲ್ಲೂರು ಶಶಿಧರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News