‘ಡಾ.ಅಂಬೇಡ್ಕರ್ ಸಾಮಾಜಿಕ ಸ್ವಾತಂತ್ರ್ಯದ ಹರಿಕಾರ’

Update: 2025-04-14 21:20 IST
‘ಡಾ.ಅಂಬೇಡ್ಕರ್ ಸಾಮಾಜಿಕ ಸ್ವಾತಂತ್ರ್ಯದ ಹರಿಕಾರ’
  • whatsapp icon

ಕುಂದಾಪುರ, ಎ.14: ಡಾ.ಬಿ.ಆರ್.ಅಂಬೇಡ್ಕರ್ ಪ್ರಜಾಪ್ರಭುತ್ವ ಮಾದರಿಯಲ್ಲಿ ರಚಿಸಿದ ಸಂವಿಧಾನ ದಿಂದಲೇ ಭಾರತ ವಿಶ್ವದಲ್ಲೇ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿದೆ. ದೂರದರ್ಶಿತ್ವ ಹೊಂದಿದ್ದ, ಸಂವಿಧಾನಶಿಲ್ಪಿ, ಭಾರತ ರತ್ನ ಡಾ. ಅಂಬೇಡ್ಕರ್ ದೇಶದ ಮಹಾನ್‌ ನಾಯಕ, ಮಹಾಮಾನವತಾವಾದಿ ಹಾಗೂ ಪ್ರಾತ:ಸ್ಮರಣೀಯರು ಎಂದು ಕುಂದಾಪುರ ಪುರಸಭೆ ಅಧ್ಯಕ್ಷ ಕೆ.ಮೋಹನದಾಸ ಶೆಣೈ ಹೇಳಿದ್ದಾರೆ.

ತಾಲೂಕು ಆಡಳಿತ, ತಾಲೂಕು ಪಂಚಾಯತ್, ಕುಂದಾಪುರ ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಕುಂದಾಪುರ ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಂಘಟನೆಗಳ ಸಹಯೋಗದೊಂದಿಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿದ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಬಿ.ಬಿ. ಹೆಗ್ಡೆ ಕಾಲೇಜಿನ ಉಪಪ್ರಾಂಶು ಪಾಲ ಡಾ.ಚೇತನ್ ಶೆಟ್ಟಿ ಕೊವಾಡಿ, ಡಾ. ಅಂಬೇಡ್ಕರ್ ಅವರು ಸ್ವಾಭಿಮಾನಿ, ಮಹಾನ್ ರಾಷ್ಟ್ರೀಯ ವಾದಿ. ಶ್ರೇಷ್ಠ ನ್ಯಾಯತಜ್ಞರಾಗಿದ್ದ ಅವರು, ಶೋಷಣೆಯಿಂದ ಕೂಡಿದ ಸಮಾಜದ ಬದುಕಿನ ಆಶಾಕಿರಣ ವಾಗಿದ್ದರು. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವದ ಪ್ರತಿಪಾದಕರಾಗಿದ್ದರು. ಡಾ.ಅಂಬೇಡ್ಕರ್ ವಾಸ್ತವ ವಾದಿ, ವಿಚಾರವಾದಿ. ಜಾತಿ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಬಗ್ಗೆ, ಜಾತಿ ವ್ಯವಸ್ಥೆಯಿಂದ ಹೊರಬರಲು ಪರಿಹಾರೋಪಾಯಗಳ ಬಗ್ಗೆ ಚಿಂತನೆ ನಡೆಸಿದ್ದರು. ಅವರು ಧರ್ಮ ವಿರೋಧಿಯಾಗಿರಲಿಲ್ಲ ಎಂದರು.

ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಪ.ಜಾತಿ-ಪ.ಪಂಗಡದ ಪ್ರತಿಭಾನ್ವಿತ ಸಾಧಕ ವಿದ್ಯಾರ್ಥಿಗಳಾದ ರತ್ನ, ಸೀತವ್ವ, ಆತ್ಮಿಕಾ, ಮಾರುತಿ ಕಲ್ಲಪ್ಪ ಹಾಗೂ ಷಣ್ಮುಗ ಎಸ್. ಅವರನ್ನು ಗೌರವಿಸಲಾಯಿತು.ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್., ಪೊಲೀಸ್ ಉಪಾಧೀಕ್ಷಕ ಎಚ್.ಡಿ.ಕುಲಕರ್ಣಿ, ಕುಂದಾಪುರ ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ ಕ್ರಾಸ್ತಾ ಶುಭಾಶಂಸನೆಗೈದರು.

ಕುಂದಾಪುರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಕುಂದಾಪುರ ತಹಶೀಲ್ದಾರ್ ಪ್ರದೀಪ ಕುರ್ಡೇಕರ್ ಎಸ್., ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ, ಪುರಸಭೆ ಮುಖ್ಯಾಧಿಕಾರಿ ಆನಂದ ಜೆ., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಉಪತಹಶೀಲ್ದಾರ್ ವಿನಯ್ ಸ್ವಾಗತಿಸಿದರು. ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ರಾಧಿಕಾ ರಾಣಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News