ಅಂಬೇಡ್ಕರ್ ಕಾರ್ಮಿಕ ವರ್ಗದ ಹಕ್ಕುಗಳ ಪ್ರಬಲ ಪ್ರತಿಪಾದಕರು

ಕುಂದಾಪುರ, ಎ.14: ಶಿಕ್ಷಣ ಪಡೆಯಿರಿ, ಸಂಘಟಿತರಾಗಿ, ಹೋರಾಟ ನಡೆಸಿ ಎಂದು ಡಾ.ಅಂಬೇಡ್ಕರ್ ಶೋಷಿತ ವರ್ಗಕ್ಕೆ ಕರೆ ನೀಡಿದ್ದರು. ಆದರೆ, ಸಂವಿಧಾನಶಿಲ್ಪಿ ಅಂಬೇಡ್ಕರ್ ಬಗ್ಗೆ ಕೆಲ ಬಲಪಂಥೀಯರು ತಪ್ಪುತಪ್ಪಾಗಿ ಸಮಾಜದೊಳಗೆ ಅಪಪ್ರಚಾರ ನಡೆಸುತಿದ್ದಾರೆ ಎಂದು ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ತಾಲೂಕಿನ ತಲ್ಲೂರು ಮತ್ತು ಸೇನಾಪುರದ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡು ತಿದ್ದರು. ಅಂಬೇಡ್ಕರ್ ಅವರು ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಸಿಗುವಂತೆ ಸಂವಿಧಾನ ರಚನೆ ಮಾಡಿದವರು. ದೇಶದ ಸಮಸ್ತರ ನಾಯಕನಾಗಿ ಮೂಡಿ ಬಂದವರು ಎಂದರು.
ಅಂಬೇಡ್ಕರ್ ಅವರು ಲೇಬರ್ ಪಾರ್ಟಿ ಸ್ಥಾಪಿಸಿ ಕಾರ್ಮಿಕರ ಕಾನೂನುಗಳ ಸುಧಾರಣೆ, ಕಾರ್ಮಿಕರ ಹಕ್ಕುಗಳಿಗಾಗಿ ಕೆಲಸ ಮಾಡಿರುವುದು ಅವರು ಕಾರ್ಮಿಕ ವರ್ಗದ ಪ್ರಬಲ ಪ್ರತಿಪಾದಕರು ಎಂಬುದನ್ನು ತೋರಿಸುತ್ತದೆ ಎಂದು ಕಲ್ಲಾಗರ ಹೇಳಿದರು.
ಈ ಸಂದರ್ಭದಲ್ಲಿ ತಲ್ಲೂರು ಕಟ್ಟಡ ಕಾರ್ಮಿಕರ ಘಟಕದ ಉಮೇಶ್, ಕೃಷ್ಣಯ್ಯ ಆಚಾರ್ಯ, ಸೇನಾಪುರ ಘಟಕದ ಪರಮೇಶ್ವರ, ಹೆರಿಯ, ಸುನೀಲ್, ಬಸವ ಮೊದಲಾದವರು ಉಪಸ್ಥಿತರಿದ್ದರು.
