ಅಂಬೇಡ್ಕರ್ ಸಾಮಾಜಿಕ ಕ್ರಾಂತಿಯ ಯುಗ ಪುರುಷ: ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ

ಕುಂದಾಪುರ, ಎ.14: ಸಮಾಜದಲ್ಲಿ ನೊಂದು, ಶೋಷಣೆಗೊಳಗಾದ ಜನರಿಗೆ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಪ್ರತಿಪಾದಿಸಿದ ಮಾನವತಾ ವಾದಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್. ಅವರು ದೇಶದ ಸಾಮಾಜಿಕ ಕ್ರಾಂತಿಯ ಯುಗ ಪುರುಷ ಎಂದು ಹಿರಿಯ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಭೀಮ ಘರ್ಜನೆ) ಉಡುಪಿ ಜಿಲ್ಲಾ ಸಮಿತಿ ಹಾಗೂ ಕುಂದಾಪುರ ತಾಲೂಕು ಸಮಿತಿಯ ಆಶ್ರಯದಲ್ಲಿ ಇಲ್ಲಿನ ಸರಕಾರಿ ಜೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಉತ್ಸವದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದರು.
ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಂವಿಧಾನದ ಮೂಲಕ ನ್ಯಾಯವನ್ನು ಒದಗಿಸಿಸುವ ಶ್ರೇಷ್ಠ ಕಾರ್ಯ ಅಂಬೇಡ್ಕರ್‌ರಿಂದ ನಡೆದಿದೆ. ದೇಶದ ಜನರು ಇಂದು ನೆಮ್ಮದಿಯ ಜೀವನವನ್ನು ಸಾಗಿಸಲು ಜಗತ್ತೆ ಮೆಚ್ಚುವ ನಮ್ಮ ಸಂವಿಧಾನ ಕಾರಣವಾಗಿದೆ. ನಮ್ಮದು ಸಜೀವ ಸಂವಿಧಾನ, ಇದು ನಿತ್ಯವೂ ಉಸಿರಾಡುತ್ತಿದೆ. ಪರಿಸ್ಥಿತಿಯ ಅವಕಾಶಗಳಿಗಾಗಿ 126 ಬಾರಿ ತಿದ್ದುಪಡಿಯಾಗಿದ್ದರೂ, ಮೂಲ ಉದ್ದೇಶ ಗಳನ್ನು ಹಾಗೆಯೇ ಉಳಿಸಿಕೊಂಡಿದೆ ಎಂದರು.
ತೆಂಗಿನ ಸಸಿಗೆ ನೀರು ಎರೆಯುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಉಪ ತಹಶೀಲ್ದಾರ್ ವಿನಯ್ ಮಾತನಾಡಿ, ಜಾತಿ ಹಾಗೂ ವ್ಯಕ್ತಿಯಾಧಾರಿತ ವ್ಯವಸ್ತೆಗಳ ನಡುವೆ ಸಾಮಾಜಿಕ ನ್ಯಾಯಕ್ಕಾಗಿ ಬದ್ಧತೆಯನ್ನು ತೋರಿದ ಡಾ.ಅಂಬೇಡ್ಕರ್ ಅವರು, ವಿದ್ಯೆ ಎಲ್ಲವನ್ನು ನೀಡುತ್ತದೆ, ವಿದ್ಯೆ ಯಿಂದ ಬಲಯುತರಾಗಿ ಎನ್ನುವ ಸಂದೇಶವನ್ನು ಸಾರಿದ್ದರು ಎಂದರು.
ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್. ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಉದ್ಘಾಟಿಸಿದರು. ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸ್ಪರ್ಧಾತ್ಮಕ ಪರೀಕ್ಷೆಗೆ ಚಾಲನೆ ನೀಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ರಾಜ್ಯಾಧ್ಯಕ್ಷ ಉದಯ ಕುಮಾರ್ ತಲ್ಲೂರು ಹಾಗೂ ಪುರಸಭೆಯ ಮುಖ್ಯಾಧಿಕಾರಿ ಆನಂದ ಜೆ. ಬಾಬಾ ಸಾಹೇಬರ ವಿಚಾರ ಮಂಡನೆ ಮಾಡಿದರು.
ಪೊಲೀಸ್ ನಿರೀಕ್ಷಕ ನಂಜಪ್ಪ ಎನ್. ಜಾಥಾಕ್ಕೆ ಚಾಲನೆ ನೀಡಿದರು. ಉದ್ಯಮಿ ರತ್ನಾಕರ ಶೆಟ್ಟಿ ಪಡು ಮಂಡು ಕರ್ನಾಟಕ ಭೀಮ ಘರ್ಜನೆ ಅಧ್ಯಯನ ಕೇಂದ್ರ ಹಾಗೂ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿ ದರು. ಗೌತಮ ತಲ್ಲೂರು ಸಂವಿಧಾನ ಪೀಠಿಕೆಯ ಓದಿದರು.
ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಚಂದ್ರ ಅಲ್ತಾರು ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ, ಸಮಿತಿ ತಾಲೂಕು ಸಂಚಾಲಕ ಮಂಜುನಾಥ ಜಿ ಹಾಗೂ ಕೃಷ್ಣ ಅಲ್ತಾರು, ಪತ್ರಕರ್ತ ಎಸ್.ಸತೀಶ್ ಕುಮಾರ್ ಕೋಟೇಶ್ವರ, ಪುರಸಭೆಯ ಪೌರ ಕಾರ್ಮಿಕ ಯೋಗೀಶ್ ಕೆ. ಅವರಿಗೆ ಜಿಲ್ಲಾ ಮಟ್ಟದ ಭೀಮರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಸುಮಲತಾ ಬಜಗೋಳಿ ಕಾರ್ಯಕ್ರಮ ನಿರೂಪಿಸಿದರು.