ಉಡುಪಿ: ಗಾಳಿ-ಮಳೆಗೆ ಹಲವು ಮನೆಗಳಿಗೆ ಹಾನಿ, ಇಬ್ಬರಿಗೆ ಗಾಯ

Update: 2025-04-14 22:20 IST
ಉಡುಪಿ: ಗಾಳಿ-ಮಳೆಗೆ ಹಲವು ಮನೆಗಳಿಗೆ ಹಾನಿ, ಇಬ್ಬರಿಗೆ ಗಾಯ
  • whatsapp icon

ಉಡುಪಿ, ಎ.14: ಉಡುಪಿ ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಇಂದು ಸಂಜೆ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಯಿಂದ ಅನೇಕ ಮನೆಗಳಿಗೆ ಹಾನಿಯಾದ ವರದಿಗಳು ಬಂದಿವೆ.ನಗರದ ಕಡಿಯಾಳಿ ವಾರ್ಡಿನಲ್ಲಿ ಮನೆ ಮೇಲೆ ಮರ ಬಿದ್ದು ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಡುಪಿ ನಗರಸಭೆಯ ಮೂಡಬೆಟ್ಟು ವಾರ್ಡಿನಲ್ಲಿ ಇಂದು ಸಂಜೆ ಸುರಿದ ಮಳೆ ಹಾಗೂ ಸುಂಟರ ಗಾಳಿಯಿಂದ ಭಾರೀ ಗಾತ್ರದ ಮರ 3 ಮನೆಗಳ ಮೇಲೆ ಬಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಉಡುಪಿ ಶಾಸಕ ಯಶಪಾಲ್ ಸುವರ್ಣ, ಕ್ಷಿಪ್ರಗತಿಯಲ್ಲಿ ತೆರವು ಕಾರ್ಯಾಚರಣೆಗೆ ಅಗ್ನಿಶಾಮಕ ದಳ ಹಾಗೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂತ್ರಸ್ತ ಕುಟುಂಬಗಳಿಗೆ ಪ್ರಾಕೃತಿಕ ವಿಕೋಪದಡಿ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸುವಂತೆ ಹಾಗೂ ತಾತ್ಕಾಲಿಕವಾಗಿ ಆಶ್ರಯ ಒದಗಿಸಲು ಕ್ರಮ ವಹಿಸುವಂತೆ ಉಡುಪಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಸದಸ್ಯ ಶ್ರೀಶ ಭಟ್ ಉಪಸ್ಥಿತರಿದ್ದರು.

ನಗರದ ಕಡಿಯಾಳಿ ವಾರ್ಡಿನಲ್ಲಿ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಸುಂಟರ ಗಾಳಿಗೆ ಬೃಹತ್ ಗಾತ್ರದ ಅಶ್ವತ್ಥ ಮರ ಮನೆಯ ಮೇಲೆ ಬಿದ್ದು ಪೂರ್ಣ ಪ್ರಮಾಣದ ಹಾನಿಯಾಗಿದ್ದು, ಮನೆಯಲ್ಲಿದ್ದ ರಾಘವೇಂದ್ರ ಭಟ್ ಹಾಗೂ ನೀರಜ ಎಂಬವರಿಗೆ ಗಾಯಗಳಾಗಿವೆ. ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಶಾಸಕ ಯಶಪಾಲ್ ಸುವರ್ಣ ಭೇಟಿ ನೀಡಿದರು. ಬಳಿಕ ಚಿಕಿತ್ಸೆ ಪಡೆಯುತ್ತಿರುವ ರಾಘವೇಂದ್ರ ಭಟ್ ಹಾಗೂ ನೀರಜರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಅಪಾರ ಹಾನಿ: ಸೋಮವಾರ ಅಪರಾಹ್ನದ ಬಳಿಕ ಸುಂಟರಗಾಳಿ ಸಹಿತ ಮಳೆ ಸುರಿದಿದ್ದು, ಸಾವಿರಾರು ಮರಗಳ ಸಹಿತ ತೆಂಗು, ಅಡಿಕೆ, ಬಾಳೆ ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿದ ವರದಿಗಳು ಬಂದಿವೆ.

ಮಲ್ಪೆ, ಕಟಪಾಡಿ, ಹಿರಿಯಡಕ ಪರಿಸರದಲ್ಲೂ ಸುಂಟರಗಾಳಿಯಿಂದ ಭಾರೀ ಪ್ರಮಾಣದ ಹಾನಿ ಸಂಭವಿಸಿರುವ ಬಗ್ಗೆ ಇಲ್ಲಿಗೆ ಮಾಹಿತಿಗಳು ಬಂದಿವೆ. ವಿದ್ಯುತ್ ಕಂಬಗಳು ಸಹ ನೂರಾರು ಸಂಖ್ಯೆಯಲ್ಲಿ ಧರಾಶಾಹಿಯಾಗಿದ್ದು, ಇದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಹಲವು ಗ್ರಾಮಗಳು ಕತ್ತಲಲ್ಲಿ ರಾತ್ರಿ ಕಳೆಯುವ ಸನ್ನಿವೇಶ ಎದುರಾಗಿದೆ.

ಬ್ರಹ್ಮಾವರ, ಹೆಬ್ರಿ, ಕುಂದಾಪುರ ಪರಿಸದಲ್ಲೂ ಗುಡುಗು-ಮಿಂಚು ಸಹಿತ ಮಳೆ ಸುರಿದಿದೆ. ಇಲ್ಲಿ ಸಾವಿ ರಾರು ಅಡಿಕೆ, ಬಾಳೆ ಗಿಡಗಳು ಧರಗೊರಗಿವೆ. ಕಟಪಾಡಿ ಏಣಗುಡ್ಡೆ ಫಾರೆಸ್ಟ್ ಗೇಟ್ ಬಳಿಯ ಮನೆ ಯೊಂದರ ಮೇಲೆ ತೆಂಗಿನ ಮರ ಬಿದ್ದು 50,000 ರೂ.ಗಳಿಗೂ ಅಧಿಕ ಹಾನಿಯ ಅಂದಾಜು ಮಾಡಲಾಗಿದೆ.



 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News