ಉಡುಪಿ ಜಿಲ್ಲೆಯಲ್ಲಿ ಆನ್‌ಲೈನ್ ಮೋಸ ಪ್ರಕರಣಗಳು: ಜನವರಿ ಒಂದೇ ತಿಂಗಳಲ್ಲಿ 20 ಕೇಸು, 3.50 ಕೋಟಿ ರೂ. ವಂಚನೆ
ಉಡುಪಿ, ಫೆ.3: ಆನ್‌ಲೈನ್ ಮೂಲಕ ಮೋಸಕ್ಕೆ ಒಳಗಾಗಿ ವಂಚನೆ ಜಾಲಕ್ಕೆ ಬೀಳುವವರ ಸಂಖ್ಯೆ ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, ಕೇವಲ ಜನವರಿ ಒಂದೇ ತಿಂಗಳಲ್ಲಿ ಇಂತಹ 20 ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಈ ಮೋಸದ ಜಾಲದಿಂದ ಒಟ್ಟು 3.50 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ.
ಜನವರಿ ತಿಂಗಳಲ್ಲಿ ಜಿಲ್ಲೆಯ ಏಳು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು 20 ಆನ್‌ಲೈನ್ ಮೋಸ ಪ್ರಕರಣಗಳಲ್ಲಿ ಒಟ್ಟು 3,50,70,629 ರೂ. ಹಣವನ್ನು ವಂಚಿಸಲಾಗಿದೆ. ಇದರಲ್ಲಿ ಹೆಚ್ಚಿನವರು ತಾವಾಗಿಯೇ ಹಣ ಹಾಕಿ ಮೋಸಕ್ಕೆ ಒಳಗಾಗಿದ್ದಾರೆ. ಕೇವಲ ಒಂದೇ ತಿಂಗಳಲ್ಲಿ ಭಾರೀ ದೊಡ್ಡ ಮೊತ್ತವನ್ನು ಜಿಲ್ಲೆಯ ಜನತೆ ಮೋಸದ ಜಾಲಕ್ಕೆ ಒಳಗಾಗಿ ಕಳೆದುಕೊಂಡಿದ್ದಾರೆ. ಈ ಹಿಂದೆ ವಂಚಕರು ಜನರನ್ನು ನೇರವಾಗಿ ಸಂಪರ್ಕಿಸಿ ಮೋಸ ಮಾಡುತ್ತಿದ್ದರೆ ಈಗ ಆ್ಯಪ್, ವೆಬ್‌ಸೈಟ್, ಫೋನ್ ಕರೆಗಳ ಮೂಲಕ ವಂಚಿಸುತ್ತಿದ್ದಾರೆ. ಒಟ್ಟಾರೆ ವಂಚನೆ ವಿಧ ಬದಲಾಗಿದೆ.
ಜನವರಿ ತಿಂಗಳಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಏಳು (27,580,241 ರೂ. ವಂಚನೆ), ಮಣಿಪಾಲ ಠಾಣೆಯಲ್ಲಿ ಐದು (44,52,047ರೂ. ವಂಚನೆ), ಬೈಂದೂರು ಠಾಣೆಯಲ್ಲಿ ಮೂರು (2.26ಲಕ್ಷ ರೂ.), ಪಡುಬಿದ್ರಿ ಠಾಣೆಯಲ್ಲಿ ಎರಡು (1,945921ರೂ.) ಹಾಗೂ ಉಳಿದಂತೆ ಕೊಲ್ಲೂರು (71,020ರೂ.), ಕಾರ್ಕಳ ನಗರ (98,900 ರೂ.) ಮತ್ತು ಉಡುಪಿ ನಗರ ಠಾಣೆ (7ಲಕ್ಷ ರೂ)ಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಇದರಲ್ಲಿ ಟ್ರೇಡಿಂಗ್ ಸೇರಿದಂತೆ ವಿವಿಧ ಆ್ಯಪ್‌ಗಳ ಮೂಲಕ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಪಡೆಯುವ ಆಸೆಯಿಂದ ಹಣ ಕಳೆದುಕೊಂಡವರ ಸಂಖ್ಯೆಯೇ ಹೆಚ್ಚು. ಇಂತಹ ಏಳು ಪ್ರಕರಣಗಳಲ್ಲಿ ಬರೋಬರೀ 2.83ಕೋಟಿ ರೂ. ಹಣವನ್ನು ಕಳೆದುಕೊಳ್ಳಲಾಗಿದೆ. ಅಲೆವೂರಿನ ವೆಂಕಟರಮಣ ಎಂಬವರು ಒಬ್ಬರೇ ಈ ರೀತಿಯ ವಂಚನೆ ಖೆಡ್ಡಾಕ್ಕೆ ಬಿದ್ದು 1,38,99,000ರೂ. ಕಳೆದು ಕೊಂಡು ಸೈ ಸುಟ್ಟುಕೊಡಿದ್ದಾರೆ.
ಅದೇ ರೀತಿ ಟಾಸ್ಕ್ ನೀಡುವ ಮೂಲಕ ಎರಡು ಪ್ರಕರಣಗಳಲ್ಲಿ ಒಟ್ಟು 48.57ಲಕ್ಷ ರೂ. ದೋಚಲಾಗಿದೆ. ಒಂದು ಪ್ರಕರಣ ದಲ್ಲಿ ವ್ಯಕ್ತಿಯೊಬ್ಬರ ಖಾತೆಯಿಂದ ತನ್ನಷ್ಟಕ್ಕೇ ಹಣ ಬೇರೆಯವರ ಖಾತೆಗೆ ವರ್ಗಾವಣೆಗೊಂಡು ವಂಚನೆಯಾಗಿದೆ. ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ಹಣ ದೋಚಿದ ಮೂರು ಪ್ರಕರಣಗಳು ಒಂದೇ ದಿನ ನಡೆದಿ ರುವ ಬಗ್ಗೆ ವರದಿಯಾಗಿದೆ.
ಉಳಿದಂತೆ ಕೊರಿಯರ್‌ನಲ್ಲಿ ಡ್ರಗ್ಸ್ ಪಾರ್ಸೆಲ್ ಕಳುಹಿಸಿರುವುದಾಗಿ ಪೊಲೀಸರ ಹೆಸರಿನಲ್ಲಿ ಬೆದರಿಸಿ ವಂಚನೆ ಎಸಗಿರುವ ಎರಡು, ಗ್ರಾಹಕರ ವೇದಿಕೆ ಹೆಸರಿನಲ್ಲಿ, ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹೀಗೆ ನಾನಾ ಮಾದರಿಯಲ್ಲಿ ಜನರನ್ನು ಮೋಸದ ಜಾಲಕ್ಕೆ ಒಳಪಡಿಸಿ ವಂಚಿಸಿರುವ ಪ್ರಕರಣ ಗಳು ಈ ಒಂದೇ ತಿಂಗಳಲ್ಲಿ ನಡೆದಿರುವುದು ವರದಿಯಾಗಿವೆ.
‘ಆನ್‌ಲೈನ್ ವಂಚನೆಗೆ ಸಂಬಂಧಿಸಿ ಬಂದ ದೂರುಗಳನ್ನೆಲ್ಲವನ್ನು ದಾಖಲಿಸಿ ಕೊಳ್ಳುತ್ತಿದ್ದೇವೆ. ಕೆಲವು ಪ್ರಕರಣಗಳಲ್ಲಿ ಮೋಸಕ್ಕೆ ಒಳಗಾಗಿ ನಾಲ್ಕೈದು ವರ್ಷ ಗಳೇ ಆಗಿರುತ್ತದೆ. ಆದರೆ ಕೆಲವರು ಈಗ ಎಚ್ಚೆತ್ತುಕೊಂಡು ದೂರು ನೀಡುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಜನ ತಾವೇ ಸ್ವಯಂ ಆಗಿ ಹಣವನ್ನು ವಂಚಕರಿಗೆ ಒಪ್ಪಿಸಿ ವಂಚನೆಗೆ ಒಳಗಾಗುತ್ತಿದ್ದಾರೆ. ಆದುದರಿಂದ ಜನರೇ ಈ ಬಗ್ಗೆ ಜಾಗೃತೆ ವಹಿಸ ಬೇಕು. ಆಗ ಮಾತ್ರ ಈ ವಂಚನೆ ಜಾಲಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ’
-ಡಾ.ಕೆ.ಅರುಣ್, ಉಡುಪಿ ಎಸ್ಪಿ