ಉಡುಪಿ ಜಿಲ್ಲೆಯ 20 ವಿದ್ಯಾಸಂಸ್ಥೆಗಳಲ್ಲಿ ಐಐಟಿ ಮದ್ರಾಸ್‌ನಿಂದ ಆನ್‌ಲೈನ್ ತರಬೇತಿ

Update: 2024-08-12 15:36 GMT

ಉಡುಪಿ: ಉಡುಪಿ ಜಿಲ್ಲೆಯ 20 ಸರಕಾರಿ ವಿದ್ಯಾಸಂಸ್ಥೆಗಳ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿ ಗಳಿಗೆ ಐಐಟಿ ಮದರಾಸು ಇವರಿಂದ ಆನ್‌ಲೈನ್ ತರಬೇತಿ ಹಾಗೂ ಕೌನ್ಸಿಲಿಂಗ್ ಕೋರ್ಸ್‌ಗಳು ಪ್ರಾರಂಭಗೊಳ್ಳಲಿದ್ದು, ಇದರ ಉದ್ಘಾಟನೆ ಆ.15ರ ಗುರುವಾರ ಅಪರಾಹ್ನ 2:00ಗಂಟೆಗೆ ಉಚ್ಚಿಲದ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆಯಲಿದೆ ಎಂದು ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಎಚ್.ಎಸ್.ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಎಚ್. ಎಸ್.ಶೆಟ್ಟಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕಾಪು ಶಾಸಕರ ಸಹಯೋಗ ದೊಂದಿಗೆ ಈ ಆನ್‌ಲೈನ್ ವ್ಯಾಸಂಗ ಹಾಗೂ ಸಮಾಲೋಚನಾ ಕೋರ್ಸ್‌ಗಳನ್ನು ಆಯೋಜಿಸುತ್ತಿದೆ ಎಂದರು.

ಮುಂದೆ ಇದನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸಲಾಗುವುದು. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ತಲಾ 50 ಶಾಲೆಗಳಲ್ಲಿ ಈ ಕೋರ್ಸ್‌ನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದರು.

ದೇಶದ ನಂ.2 ವಿದ್ಯಾಸಂಸ್ಥೆ ಎನಿಸಿರುವ ಐಐಟಿ ಮದ್ರಾಸ್ (ಚೆನ್ನೈ)ನ ಸಮಾಜ ಸೇವಾ ವಿಭಾಗವಾಗಿರುವ ಐಐಟಿ ಮದ್ರಾಸ್ ಪ್ರವರ್ತಕ್ ಗ್ರಾಮೀಣ ಭಾಗದ ಮಕ್ಕಳನ್ನು ಕೇಂದ್ರೀಕರಿಸಿಕೊಂಡು ಈಗಾಗಲೇ ದೇಶದ ವಿವಿಧ ರಾಜ್ಯಗಳ 350 ಶಾಲೆಗಳಲ್ಲಿ ಈ ಕೋರ್ಸ್‌ನ್ನು ಕಳೆದ ನಾಲ್ಕೈದು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ ಎಂದರು.

ಮೊದಲು ತಮಿಳುನಾಡಿನ ವಿವಿಧ ಶಾಲೆಗಳಲ್ಲಿ ನೀಡುತಿದ್ದ ಕೋರ್ಸ್‌ನ್ನು ಪ್ರಧಾನಿಯವರ ಕೋರಿಕೆಯ ಮೇರೆಗೆ ವಾರಣಾಸಿಯಲ್ಲಿ ಪ್ರಾರಂಭಿಸಿದ್ದು, ಅದರ ಯಶಸ್ಸಿನಿಂದ ಇದೀಗ ದೇಶದ ಅನೇಕ ರಾಜ್ಯಗಳಿಗೆ ವಿಸ್ತರಿಸಲಾಗಿದೆ ಎಂದು ಡಾ.ಶೆಟ್ಟಿ ವಿವರಿಸಿದರು.

ಇದೀಗ ಕರ್ನಾಟಕದ ಶಾಲೆಗಳಲ್ಲಿ ಇದನ್ನು ವಿಸ್ತರಿಸಲು ನಮ್ಮ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗ ನೀಡುತ್ತಿದೆ. ಬೆಂಗಳೂರಿನ ಮೆ.ಮೈಸೂರು ಮರ್ಕಂಟೈಲ್ ಕಂಪೆನಿ ಸಮಾಜ ಸೇವಾ ಕಾರ್ಯಗಳಿಗಾಗಿ 2008ರಲ್ಲಿ ನೊಂದಾಯಿಸಿದ ಸಂಸ್ಥೆ ಈ ಟ್ರಸ್ಟ್ ಆಗಿದ್ದು, ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದೆ ಎಂದರು.

ಇತ್ತೀಚೆಗೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಸರಕಾರಿ ಖಾಸಗಿ ಸಹಭಾಗಿತ್ವದಲ್ಲಿ ಬ್ರಹ್ಮಾವರದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್)ನ್ನು ಮೂರು ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯದೊಂದಿಗೆ ಸರ್ವತೋಮುಖ ಅಭಿವೃದ್ಧಿ ಕಾರ್ಯ ದಲ್ಲಿ ತೊಡಗಿಸಿಕೊಂಡಿದೆ. ಅಲ್ಲದೇ ಪ್ರತಿವರ್ಷ ಸುಮಾರು 41,000 ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಹಾಗೂ ವಿದ್ಯಾರ್ಥಿ ವೇತನಗಳನ್ನು ವಿತರಿಸಿಕೊಂಡು ಬಂದಿದೆ ಎಂದರು.

ಐಐಟಿ ಮದ್ರಾಸ್‌ನ ಕೋರ್ಸ್ ಎಂಟರಿಂದ 10ನೇ ತರಗತಿಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ವಿದ್ಯಾರ್ಥಿ ಗಳಿಗೆ ಪ್ರತ್ಯೇಕವಾಗಿರುತ್ತದೆ. ಮದ್ರಾಸ್ ಐಐಟಿ ನಿಯೋಜಿಸುವ ನುರಿತ ತಜ್ಞರು ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಆ.15ರಂದು ಕಾರ್ಯಕ್ರಮವನ್ನು ಐಐಟಿ ಮದ್ರಾಸ್‌ನ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ಎಂ.ಜೆ.ಶಂಕರಮಣ ಉದ್ಘಾಟಿಸಲಿದ್ದಾರೆ ಎಂದ ಡಾ.ಎಚ್.ಎಸ್.ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಟ್ರಸ್ಟ್‌ನ ಉಪಾಧ್ಯಕ್ಷ ಎಚ್.ನಾಗರಾಜ ಶೆಟ್ಟಿ, ಅಮಾಸೆಬೈಲು ಗ್ರಾಪಂ ಸದಸ್ಯಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

ಟ್ರಸ್ಟ್‌ನಿಂದ ಕೊರಗ ಸಮುದಾಯಕ್ಕೆ 100 ಮನೆ

ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಕರಾವಳಿಯಲ್ಲಿ ತೀರಾ ಹಿಂದುಳಿದಿರುವ ಕೊರಗ ಸಮುದಾಯದವರಿಗೆ ಸುಮಾರು 100 ಮನೆಗಳನ್ನು ಸುಂದರವಾಗಿ ನಿರ್ಮಿಸಿಕೊಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಅಧ್ಯಕ್ಷ ಡಾ.ಎಚ್.ಎಸ್.ಶೆಟ್ಟಿ ತಿಳಿಸಿದರು.

ಮೊದಲ ಹಂತದಲ್ಲಿ ಈಗಾಗಲೇ 14 ಮನೆಗಳನ್ನು ಸಾಬರಕಟ್ಟೆ ಸಮೀಪದ ಜನ್ನಾಡಿಯಲ್ಲಿ ನಿರ್ಮಿಸಲಾಗುತ್ತಿದೆ. ಪ್ರತಿ ಮನೆ ಯನ್ನು ಕನಿಷ್ಠ 12 ಲಕ್ಷ ರೂ. ವೆಚ್ಚದಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಿಸಲಾಗುತ್ತಿದೆ. ಈ ಮನೆಗಳನ್ನು ಮುಂದಿನ ಅಕ್ಟೋಬರ್ ತಿಂಗಳಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಗುರಿ ಇದೆ ಎಂದವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News