ಪರಶುರಾಮನ ಮೂರ್ತಿ ನಕಲಿ ಎಂಬುದು ಸಾಬೀತು: ವಿವೇಕ್
ಕಾರ್ಕಳ, ಅ.13: ಉಮಿಕಲ್ಲು ಬೆಟ್ಟದಲ್ಲಿ ನಿಲ್ಲಿಸಿದ ಮೂರ್ತಿಯ ಸಾಚಾತನದ ಬಗ್ಗೆ ಒಂದು ತಿಂಗಳೊಳಗೆ ಮೂರನೇ ಪಾರ್ಟಿಯಿಂದ ತನಿಖೆ ನಡೆಸುವುದಾಗಿ ಹೇಳಿದ್ದ ಜಿಲ್ಲಾಡಳಿತ ಇದುವರೆಗೆ ಯಾವುದೇ ತನಿಖೆಗೆ ಮುಂದಾಗಿಲ್ಲ. ಈಗ ಮೂರ್ತಿಯನ್ನು ಏಕಾಏಕಿ ಕೆಳಗಿಳಿಸಲಾಗಿದೆ ಎಂದು ಥೀಮ್ ಪಾರ್ಕ್ ಕಾಮಗಾರಿ ಬಗ್ಗೆ ಸಂಶಯ ವ್ಯಕ್ತಪಡಿಸಿ ಹೋರಾಟ ನಡೆಸಿದ್ದ ಕಾರ್ಕಳದ ಸಮಾನ ಮನಸ್ಕರ ಹೋರಾಟ ಸಮಿತಿಯ ಮುಖಂಡ ವಿವೇಕ್ ಹೇಳಿದ್ದಾರೆ.
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಿಲ್ಲಿಸಿರುವ ಪರಶುರಾಮನ ಮೂರ್ತಿ ನಕಲಿ ಎಂಬುದು ಇದೀಗ ಸಾಬೀತಾಗಿದೆ. ಅಲ್ಲಿದ್ದ ನಕಲಿ ಮೂರ್ತಿಯನ್ನು ಇದೀಗ ಕೆಳಗಿಳಿಸಿದ್ದಾರೆ. ಇದಕ್ಕೆ ನೇರ ಹೊಣೆ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್. ಅವರು ರಾಜಕೀಯ ಗಿಮಿಕ್‌ಗಾಗಿ ಹಾಗೂ ಚುನಾವಣಾ ಗಿಮಿಕ್‌ಗಾಗಿ ಮಾಡಿರುವ ಕೆಲಸವಿದು ಎಂದು ಅವರು ಆರೋಪಿಸಿದರು.
ಹಿಂದುತ್ವ ಅಂತ ಹೇಳಿಕೊಂಡು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಪರಶುರಾಮನ ಕೃಪೆಯಿಂದ ಅಸಲಿ ಕಂಚಿನ ಪ್ರತಿಮೆಯ ಪ್ರತಿಷ್ಠಾಪನೆ ನಡೆಯುತ್ತಿದೆ. ಆದರೆ ಮತ್ತೆ ಕಂಚಿನ ಪ್ರತಿಮೆಯನ್ನೇ ಪ್ರತಿಷ್ಠಾಪಿ ಸುತ್ತಾರೆ ಎಂದು ನಮಗೆ ನಂಬಿಕೆಯಿಲ್ಲ. ಮತ್ತೆ ಗ್ಲಾಸ್ ಫೈಬರ್ ಮೂರ್ತಿ ಯನ್ನೇ ಪ್ರತಿಷ್ಠಾಪಿಸಬಹುದು ಎಂದ ಸಂಶಯ ವ್ಯಕ್ತಪಡಿಸಿದ ಅವರು, ಕದ್ದು ಮುಚ್ಚಿ ಕೆಲಸ ಮಾಡೋದು ಬಿಟ್ಟು ಇನ್ನಾದರೂ ಬಹಿರಂಗವಾಗಿ ಕೆಲಸ ಮಾಡಲಿ ಎಂದರು.
ಶಾಸಕ ಸುನಿಲ್ ಕುಮಾಕ್ ಇಡೀ ಪ್ರಕರಣಕ್ಕೆ ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಅವರ ಮೌನದಿಂದಲೇ ಸತ್ಯಾಂಶ ಸಾಬೀತಾಗಿದೆ. ಮುಂದೆ ಅಸಲಿ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸುವ ದಿನ ಜನರಿಗೆ ಸ್ಪಷ್ಟನೆ ಕೊಡಲು ಮನವಿ ಮಾಡಿದ್ದೇವೆ. ಯಾವ ಭಾಗ ಗ್ಲಾಸ್ ಫೈಬರ್ ಇದ್ದು ಯಾವ ಭಾಗ ಕಂಚಿನದ್ದು ಅನ್ನೋದರ ಬಗ್ಗೆ ಸ್ಪಷ್ಟನೆ ಬೇಕು. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದರಿಂದ ಸ್ಪಷ್ಟನೆ ನೀಡುವಂತೆ ಡಿಸಿಗೆ ಮನವಿ ಮಾಡಿದ್ದೇವೆ ಎಂದವರು ಹೇಳಿದರು.
ಸಾರ್ವಜನಿಕ ಆರೋಪ: ಪೊಲೀಸರ ಬಿಗಿ ಭದ್ರತೆಯನ್ನು ನಡುವೆಯೇ ಎರಡು ಕೋಟಿ ವೆಚ್ಚದ ನಕಲಿ ಪರಶುರಾಮ್ ವಿಗ್ರಹ ಮಾಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪೊಲೀಸ್ ಸಮ್ಮಖದಲ್ಲೇ ಮೂರ್ತಿ ಸಾಗಾಟವಾಗಿದೆ ಎಂದು ಕಾಂಗ್ರೆಸ್ ನಾಯಕ ಶುಭದ ರಾವ್ ಗಂಭೀರ ಆರೋಪ ಮಾಡಿದ್ದಾರೆ.
ಭ್ರಷ್ಟಚಾರಕ್ಕೆ ಜಿಲ್ಲಾಡಳಿವೇ ಸಾಥ್: ಬೈಲೂರಿನ ಉಮಿಕಲ್ಲು ಗುಡ್ಡದಲ್ಲಿ ಕಾನೂನು ಬಾಹಿರವಾಗಿ ನಡೆದ ಪರಶುರಾಮ ಥೀಮ್ ಪಾರ್ಕ್‌ಗೆ ಸರಕಾರದಿಂದಲೇ 14ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. ಜಿಲ್ಲಾಡಳಿತವೇ ಕಾಮಗಾರಿ ಅದೇಶ ನೀಡಿರುವುದರಿಂದ ಜಿಲ್ಲಾಧಿಕಾರಿಗಳ ನಡೆ ಸಂಶಯಾಸ್ಪದಯಾಗಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಶುಭದ ರಾವ್ ಆಗ್ರಹಿಸಿದ್ದಾರೆ.
ಇದುವರೆಗೆ ಸಾರ್ವಜನಿವಾಗಿ ಗೋಚರವಾಗುತ್ತಿದ್ದ ಪರಶುರಾಮ ಮೂರ್ತಿಯ ಕೊಡಲಿ ಹಾಗೂ ಬಿಲ್ಲು ಇದೀಗ ಮಾಯವಾಗಿದ್ದು ಸಂಶಯಕ್ಕೆ ಎಡೆಮಾಡಿದೆ. ವಿಗ್ರಹ ಮಾಯವಾಗುವುದರೊಂದಿಗೆ ನಕಲಿ ವಿಗ್ರಹದ ಬದಲಾವಣೆ ಕೆಲಸ ಪೋಲಿಸ್ ಪಹರೆಯೊಂದಿಗೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.