ಪರಶುರಾಮ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರವೇ ಅಲ್ಲ: ಶಾಸಕ ಸುನೀಲ್ ಕುಮಾರ್
ಉಡುಪಿ, ಅ.21: ಪರಶುರಾಮ ಥೀರ್ಮ್ ಪಾರ್ಕ್‌ನಲ್ಲಿ ಹಿಂದುತ್ವ ಮತ್ತು ಹಿಂದೂಗಳ ಭಾವನೆಗೆ ದಕ್ಕೆಯಾಗಿದೆ ಎಂದೆಲ್ಲ ಕೆಲವರು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಪರಶುರಾಮ ಥೀಮ್ ಪಾರ್ಕ್ ಧಾರ್ಮಿಕ ಕ್ಷೇತ್ರವೇ ಅಲ್ಲ. ಅದೊಂದು ಪ್ರವಾಸಿ ತಾಣ ಆಗಿದೆ. ಅಲ್ಲಿಗೆ ಯಾರು ಬೇಕಾದರೂ ಪಾದರಕ್ಷೆಯನ್ನು ಹಾಕಿಕೊಂಡು ಹೋಗಬಹುದು. ಅಲ್ಲಿ ತೆಂಗಿನಕಾಯಿ ಒಡೆ ಯಲು, ಊದುಬತ್ತಿ ಹಚ್ಚಲು, ಮಂಗಳಾರತಿ ಮಾಡಲು ಅವಕಾಶವೇ ಇಲ್ಲ ಎಂದು ಕಾರ್ಕಳ ಶಾಸಕ, ಮಾಜಿ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಾರ್ಕಳ ಬಿಜೆಪಿ ಕಚೇರಿಯಲ್ಲಿಂದು ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಪರಶುರಾಮ ಥೀಮ್ ಪಾರ್ಕ್ ಸ್ಥಾಪಿಸಲಾಗಿದೆ. ಈ ಯೋಜನೆ ಪೂರ್ಣಗೊಂಡಿಲ್ಲ, ಇದರಲ್ಲಿ ಸಣ್ಣಪುಟ್ಟ ಬದಲಾವಣೆಗಳಿವೆ ಮತ್ತು ಅದಕ್ಕೆ ಎರಡು ತಿಂಗಳ ಕಾಲಾವಕಾಶಬೇಕೆಂದು ವಿಗ್ರಹ ನಿರ್ಮಿಸಿದ ಶಿಲ್ಪಿಗೆ ಸನ್ಮಾನ ಮಾಡುವ ಸಂದರ್ಭದಲ್ಲೇ ನಾನು ಹೇಳಿದ್ದೆ ಎಂದರು.
ಅದೊಂದು ಪ್ರವಾಸೋದ್ಯಮ ಸ್ಥಳವೆಂದು ಮೊದಲಿನಿಂದಲೂ ನಾನು ಹೇಳಿಕೊಂಡು ಬಂದಿದ್ದೇನೆ. ಆದರೆ ಕೆಲವರಿಗೆ ಈಗ ಹಿಂದುತ್ವ ಶುರುವಾಗಿ ಬಿಟ್ಟಿದೆ. ಭಾವನೆಗೆ ಧಕ್ಕೆಯಾಗಿದೆಂದು ಹೇಳುವವರು ಪಾರ್ಕ್‌ನ ಕೆಳಗೆ ನಿರ್ಮಿಸಿರುವ ಭಜನಾ ಮಂದಿರಕ್ಕೆ ಒಂದು ದಿನವೂ ಭೇಟಿ ಕೊಟ್ಟಿಲ್ಲ. ಒಂದು ರೂಪಾಯಿ ಹುಂಡಿಗೆ ದುಡ್ಡು ಹಾಕಿಲ್ಲ ಎಂದು ಅವರು ಟೀಕಿಸಿದರು.
ಇದಕ್ಕೆ ಧಾರ್ಮಿಕ ಸ್ಪರ್ಶ ಕೊಡುವ ನಿಟ್ಟಿನಲ್ಲಿ ಕೆಳಗೊಂದು ಭಜನಾ ಮಂದಿರ ನಿರ್ಮಾಣ ಮಾಡಲಾಗಿದೆ. ಮೂರು ದಿನಗಳ ಕಾರ್ಯದಲ್ಲಿ ಮೊದಲ ದಿನ ಪರಶುರಾಮ ಮೂರ್ತಿಯ ಉದ್ಘಾಟನೆ, ಎರಡನೇ ದಿನ ಭಜನಾ ಮಂದಿರದ ಉದ್ಘಾಟನೆ ಮಾಡಲಾಗಿದೆ. ಧಾರ್ಮಿಕತೆ ಬೇರೆ, ಪ್ರವಾಸೋದ್ಯಮ ಬೇರೆ ಎಂಬ ಕಾರಣಕ್ಕೆ ಈ ಎರಡು ಕಾರ್ಯಕ್ರಮವನ್ನು ಬೆರೆಸಿಲ್ಲ. ಪರಶುರಾಮನ ಮೂರ್ತಿಯನ್ನು ಬೇರೆಯಾಗಿ ಉದ್ಘಾಟನೆ ಮಾಡಲಾಗಿತ್ತು. ಇದು ಅರ್ಥ ಮಾಡಿಕೊಳ್ಳದ ಕೆಲವರು ದಿನಕ್ಕೊಂದು ಕಟ್ಟು ಕತೆಗಳನ್ನು ಹೇಳಿ ಜನರನ್ನು ನಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ಮಣಿರಾಜ್ ಶೆಟ್ಟಿ, ಮಹಾವೀರ ಜೈನ್, ರೇಷ್ಮಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
‘ಅನುಮಾನ ಇದ್ದರೆ ತನಿಖೆ ಮಾಡಲಿ’
ಪರಶುರಾಮ ಮೂರ್ತಿಯ ಬಗ್ಗೆ ಅನುಮಾನ ಇದ್ದರೆ ತನಿಖೆ ಮಾಡಲಿ. ಯಾರು ಕೂಡ ತನಿಖೆ ಮಾಡಬೇಡಿ ಎಂದು ಹೇಳಿಲ್ಲ. ಇವರ ಸರಕಾರ ಬಂದು ಐದು ತಿಂಗಳಾದರೂ ಈ ಕುರಿತು ಯಾಕೆ ಇನ್ನೂ ತನಿಖೆ ಮಾಡುತ್ತಿಲ್ಲ. ಇವರು ತನಿಖೆ ಮಾಡದಿರುವುದರಿಂದ ಇದರಲ್ಲಿ ಅವರ ಸಮಸ್ಯೆ ಇದೆಯೇ ಹೊರತು ನಮ್ಮ ಸಮಸ್ಯೆ ಅಲ್ಲ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಗುಣಮಟ್ಟದಲ್ಲಿ ವ್ಯತ್ಯಾಸ ಆಗಿದ್ದರೆ ಅವನನ್ನು ಗಲ್ಲಿಗೇರಿಸಿ, ಯಾರನ್ನೂ ಬೇಕಾದರೂ ಶಿಕ್ಷೆಗೆ ಒಳಪಡಿಸಿ ಎಂದು ನಾವು ಅವತ್ತೇ ಹೇಳಿದ್ದೆವು. ಈ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ಪ್ರದರ್ಶಿಸುತ್ತಿದೆ. ತನಿಖೆ ಮಾಡಲು ತಯಾರಿಲ್ಲ. ಪಾರ್ಕ್‌ಗೆ ನಾವು ಮಂಜೂರಾತಿ ಮಾಡಿದ ಹಣ ಬಿಡುಗಡೆ ಮಾಡಲು ತಯಾರಿಲ್ಲ. ಕೆಲಸ ಶುರು ಮಾಡಲು ತಯಾರಿಲ್ಲ, ಅಪಪ್ರಚಾರ ನಿಲ್ಲಿಸಲು ತಯಾರಿಲ್ಲ. ಯಾವುದನ್ನೂ ಮಾಡಲು ತಯಾರಿಲ್ಲ ಎಂದು ಅವರು ಹೇಳಿದರು.