ಕರಾವಳಿ ಜಿಲ್ಲೆಗಳಲ್ಲಿ ಮಾ.31ರವರೆಗೆ ಗಾಳಿ-ಮಳೆ ಸಾಧ್ಯತೆ
ಉಡುಪಿ: ರಾಜ್ಯದ ಪಶ್ಚಿಮ ಕರಾವಳಿಯ ಉಡುಪಿ ಮತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾ.31ರವರೆಗೆ ಅಲ್ಲಲ್ಲಿ ಭಾರೀ ಗಾಳಿಯೊಂದಿಗೆ ಗುಡುಗು ಸಿಡಿಲು ಸಹಿತ ಮಳೆ ಸುರಿಯುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದೆರಡು ದಿನಗಳಿಂದ ಜಿಲ್ಲೆಯಾದ್ಯಂತ ಭಾರೀ ಗಾಳಿ, ಸಿಡಿಲು-ಗುಡುಗು ಸಹಿತ ಸುರಿದ ಮಳೆಯಿಂದ ಇನ್ನಷ್ಟು ಹಾನಿಯ ವಿವರಗಳು ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಮಿಗೆ ಬಂದಿವೆ. ಇದರಲ್ಲಿ ಕಾರ್ಕಳ ಮುಡಾರಿನ ಕೋಳಿ ಫಾರ್ಮ್ ಸಂಪೂರ್ಣ ಹಾನಿ, ಕಾರ್ಕಳ ಮತ್ತು ಬೈಂದೂರು ತಾಲೂಕುಗಳ 24 ಮನೆಗಳಿಗೆ ಭಾಗಶ:ದಿಂದ ಸಂಪೂರ್ಣ ಹಾನಿ ಸೇರಿದೆ.
ಅಲ್ಲದೇ ಕಾರ್ಕಳ ತಾಲೂಕಿನಲ್ಲಿ ತೋಟಗಾರಿಕಾ ಬೆಳೆಗಳಿಗೆ ಹಾನಿಯಾದ 19 ಪ್ರಕರಣಗಳು, ಕುಂದಾಪುರ ತಾಲೂಕಿನಲ್ಲಿ ನಾಲ್ಕು ಪ್ರಕರಣ, ಬೈಂದೂರು ತಾಲೂಕಿನಲ್ಲಿ ಐದು ಪ್ರಕರಣಗಳು ವರದಿಯಾಗಿವೆ. ಇನ್ನು ಕಾರ್ಕಳ, ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಮಿಯ್ಯಾರು, ಕೆರಾಡಿ ಹಾಗೂ ಜಡ್ಕಲ್‌ನಲ್ಲಿ ಗಾಳಿ-ಮಳೆಯಿಂದ ಅಂಗಡಿ ಹಾಗೂ ದನದ ಕೊಟ್ಟಿಗೆಗೆ ಹಾನಿಯಾದ ವರದಿ ಬಂದಿದ್ದು, 75,000ರೂ.ಗಳಿಗೂ ಅದಿಕ ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕು ಮುಡಾರು ಗ್ರಾಮದ ಕೃಷ್ಣಪ್ಪ ಪೂಜಾರಿ ಎಂಬವರಿಗೆ ಸೇರಿದ ಕೋಳಿ ಫಾರ್ಮ್‌ನ 150ಕ್ಕೂ ಅಧಿಕ ಸಿಮೆಂಟ್ ಶೀಟ್‌ಗಳು ಗಾಳಿಗೆ ಹಾರಿಹೋಗಿದ್ದು, ಅಲ್ಲಿದ್ದ ಕೋಳಿಗಳು ಮೃತಪಟ್ಟಿವೆ. ಇದರಿಂದ ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಒಟ್ಟಾರೆ 14 ಲಕ್ಷ ರೂ. ಹಾನಿ:
ಜಿಲ್ಲೆಯಲ್ಲಿ ಕಳೆದೆರಡು ದಿನಗಳ ಮಳೆಯಿಂದ ಇನ್ನೂ 14 ಲಕ್ಷ ರೂ.ಗಳಿಗೂ ಅಧಿಕ ಸೊತ್ತುಗಳಿಗೆ ಹಾನಿಯಾಗಿರುವ ಅಂದಾಜು ಮಾಡಲಾಗಿದೆ. ಕಾರ್ಕಳ ತಾಲೂಕಿನಲ್ಲಿ 19 ಮನೆಗಳಿಗಾದ ಹಾನಿಯಂದ 2.90 ಲಕ್ಷ ರೂ., ಬೈಂದೂರಿನ 5 ಮನೆಗಳಿಗೆ ಅಂದಾಜು 2.55ಲಕ್ಷ ರೂ., ಕಾರ್ಕಳ ತಾಲೂಕಿನಲ್ಲಿ 19 ತೋಟಗಾರಿಕಾ ಬೆಳೆಗಳಿಗಾದ ಹಾನಿಯಿಂದ 3.50ಲಕ್ಷ ರೂ, ಕುಂದಾಪುರ ತಾಲೂಕಿನಲ್ಲಿ ನಾಲ್ಕು ಪ್ರಕರಣಗಳಿಂದ 1.20 ಲಕ್ಷ ರೂ. ಬೈಂದೂರಿನ ಐದು ಪ್ರಕರಣಗಳಿಂದ 2.90 ಲಕ್ಷ ರೂ. ನಷ್ಟ ಸಂಭವಿಸಿದ ಮಾಹಿತಿಗಳು ಇಲ್ಲಿಗೆ ಬಂದಿವೆ.