ಮಣಿಪಾಲದಲ್ಲಿರುವ ವಿಪಕ್ಷ ನಾಯಕರ ಪಬ್, ಬಾರ್ ಗಳ ವಿರುದ್ಧ ಕ್ರಮಕ್ಕೆ ಸಿಎಂ ಗೆ ಮನವಿ

Update: 2023-08-02 09:39 GMT

ಉಡುಪಿ, ಆ.2: ಮಣಿಪಾಲದಲ್ಲಿ ಸಾಮಾಜಘಾತುಕ ಚಟುವಟಿಕೆಗಳನ್ನು ನಡೆಯುತ್ತಿರುವ ವಿಪಕ್ಷ ನಾಯಕರ ಪಬ್, ಬಾರ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಹಲವು ಬೇಡಿಕೆಗಳ ಮನವಿಯನ್ನು ಉಡುಪಿಯ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಉಡುಪಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಲ್ಲಿಸಿದರು.

ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲಾ ಕಾಲೇಜುಗಳನ್ನು ಬಿಜೆಪಿ ಪಕ್ಷದವರು ಕೋಮು ಗಲಭೆಯ ಕೇಂದ್ರವನ್ನಾಗಿ ಮಾಡಲು ಹೊರಟಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಠಿಸಿದೆ. ಕಳೆದ ವರ್ಷ ನಡೆದ ಹಿಜಾಬ್ ಘಟನೆ ಎಲ್ಲಿಂದ ಮತ್ತು ಯಾಕೆ ಪ್ರಾರಂಭ ಆಯಿತು ಎಂಬುದು ಇಂದಿಗೂ ನಿಗೂಢ. ಇದರಲ್ಲಿ ಯಾವ ಯಾವ ಸಂಘಟನೆಗಳು ಒಟ್ಟು ಸೇರಿ ಸಮಾಜದಲ್ಲಿ ಗೊಂದಲ ಮೂಡಿಸಲು ಪ್ರಯತ್ನಪಟ್ಟಿದೆ ಎಂಬುದರ ಬಗ್ಗೆ ತಮ್ಮ ಸರಕಾರದ ಅವಧಿಯಲ್ಲಿ ಸಂಪೂರ್ಣ ತನಿಖೆ ಆಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಅದೇ ರೀತಿ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಒಂದು ಘಟನೆಯ ಸತ್ಯ ವಿಚಾರ ಇಂದಿಗೂ ನಿಗೂಢ. ಯಾಕೆಂದರೆ ಘಟನೆ ನಡೆದು ಹತ್ತು ಹಲವು ದಿನಗಳು ಕಳೆದರೂ ಕೂಡ ಬಿಜೆಪಿ ಪಕ್ಷದ ವತಿಯಿಂದ ವಿವಿಧ ರೀತಿಯ ಪ್ರತಿಭಟನೆ ನಡೆದರೂ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಕಾಲೇಜಿನ ಮುಖ್ಯಸ್ಥ ಡಾ.ಕೃಷ್ಣ ಪ್ರಸಾದ್ ಯಾವುದೇ ರೀತಿಯ ಹೇಳಿಕೆ ಯಾಕೆ ಕೊಟ್ಟಿಲ್ಲ. ಸಂತ್ರಸ್ತೆ ಯಾವುದೇ ದೂರನ್ನು ಕೊಟ್ಟಿಲ್ಲ.

ರಾಜಕೀಯ ಲಾಭಕ್ಕೆ ಏನನ್ನೂ ಮಾಡಲು ಹೇಸದ ಬಿಜೆಪಿ ಪಕ್ಷದವರು ಈ ಘಟನೆಯನ್ನು ಇಟ್ಟುಕೊಂಡು ಮತೀಯ ಘರ್ಷಣೆ ಹುಟ್ಟುಹಾಕುವ ಸಾಧ್ಯತೆ ಇರುವುದರಿಂದ ಕಾಲೇಜಿನಲ್ಲಿ ಕ್ಯಾಮೆರಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ರೀತಿ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಬೇಕು ಎಂದು ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ.

ಉಡುಪಿಯ ವಿದ್ಯಾರ್ಥಿಗಳ ಅದರಲ್ಲೂ ಹಿಂದೂ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಅವರ ಶೀಲದ ಬಗ್ಗೆ ಅತಿಯಾದ ಕಾಳಜಿ ತೋರಿಸುತ್ತಿರುವ ಕೆಲವು ಬಿಜೆಪಿ ನಾಯಕರು, ಮಣಿಪಾಲದಲ್ಲಿ ನಡೆಯುವ ಪಬ್, ಕ್ಲಬ್, ಗಾಂಜಾ ವ್ಯವಹಾರ ಸಹಿತ ಇತರ ಸಮಾಜಘಾತಕ ಚಟುವಟಿಕೆಗಳ ಬಗ್ಗೆ ಯಾಕೆ ಮಾತಾಡುತ್ತಿಲ್ಲ. ನಿಯಮ ಮೀರಿ, ಸಮಯ ಮೀರಿ ಎಲ್ಲ ಅಧಿಕೃತ ಪರವಾನಿಗೆಯ ನಿಯಮಗಳನ್ನೂ ಮೀರಿ ಅನೈತಿಕ ಚಟುವಟಿಕೆ ನಡೆಯುವಾಗ ಮಣಿಪಾಲದ ಇತಿಹಾಸದಲ್ಲೇ ಒಂದೇ ಬಾರಿ ಕೂಡ ಸಂಘಪರಿವಾರ ಸಂಘಟನೆಗಳು ಯಾಕೆ ಪಬ್ ದಾಳಿ ಮಾಡಿಲ್ಲ? ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.

ಇಲ್ಲಿರುವ ಬಹುತೇಕ ಪಬ್, ಬಾರ್ ಗಳೆಲ್ಲವೂ ಯಾವ ಪಕ್ಷದ ನಾಯಕರ ಅಧೀನದಲ್ಲಿ ಇದೆ? ಪೊಲೀಸರು ಯಾಕೆ ಮಾತಾಡಿಲ್ಲ? ಯಾಕೆ ಮಧ್ಯರಾತ್ರಿ ಕಳೆದ ನಂತರ ಕೂಡ ಬಾರ್ ಗಳು ತೆರೆದಿರುತ್ತದೆ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎನ್ನುವ ನೀತಿಯನ್ನು ಕೈ ಬಿಡಬೇಕು ಮತ್ತು ಉಡುಪಿ ಎಸ್ಪಿ ಮತ್ತು ಅಬಕಾರಿ ಇಲಾಖೆಗೆ ಕಟ್ಟುನಿಟ್ಟಿನ ಆದೇಶ ನೀಡಿ ಎಲ್ಲ ಅಕ್ರಮ ಚಟುವಟಿಕೆಗಳನ್ನು ಕೂಡಲೇ ನಿಲ್ಲುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಮುಖ್ಯಮಂತ್ರಿಯವರನ್ನು ಒತ್ತಾಯಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News