ವಾಸ್ತವದ ವೈಜ್ಞಾನಿಕ ವರದಿ ಸಲ್ಲಿಸಲು ರಾಜ್ಯ ಸರಕಾರ ವಿಫಲ: ಶೋಭಾ ಕರಂದ್ಲಾಜೆ
ಉಡುಪಿ, ಸೆ.25: ಕರ್ನಾಟಕ ಮತ್ತು ತಮಿಳುನಾಡುಗಳ ನಡುವೆ ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯ ಸರಕಾರದ ನಡೆ ಹಾಗೂ ಸಿದ್ಧತೆಯ ಕೊರತೆಯನ್ನು ತೀವ್ರವಾಗಿ ಟೀಕಿಸಿದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಇದರಿಂದಾಗಿ ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನದಿ ಪ್ರಾಧಿಕಾರದ ಎದುರು ಸಮರ್ಥವಾಗಿ ವಾದ ಮಂಡಿಸಲು ರಾಜ್ಯ ವಿಫಲವಾಗಿದೆ ಎಂದು ದೂರಿದರು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ, ಪ್ರಸಕ್ತ ಸನ್ನಿವೇಶದ ಸ್ಥಿತಿಗತಿಯನ್ನೊಳಗೊಂಡ ವಾಸ್ತವ ಸ್ಥಿತಿಯನ್ನು ವಿವರಿಸುವ ವೈಜ್ಞಾನಿಕ ವರದಿಯನ್ನು ತಯಾರಿಸದೇ ವಾದ ಮಂಡಿಸಿದೆ ಎಂದರು.
ಈ ಮಳೆಗಾಲದ ಋತುವಿನಲ್ಲಿ ವಾಡಿಕೆಯ ಮಳೆಯಾಗದೇ ರಾಜ್ಯದ ಹೆಚ್ಚುಕಡಿಮೆ ಎಲ್ಲಾ ತಾಲೂಕುಗಳಲ್ಲಿ ಬರಗಾಲ ಇದೆ. ರಾಜ್ಯ ಸರಕಾರವೇ 195 ತಾಲೂಕುಗಳು ಬರಪೀಡಿತ ಎಂದು ಘೋಷಿಸಿದೆ. ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದೇ ಕಾವೇರಿ ನದಿ. ಈ ವರ್ಷ ಮಳೆ ಕೊರತೆ ಯಿಂದ 118ಟಿಎಂಸಿ ನೀರು ಇರಬೇಕಿದ್ದಲ್ಲಿ ಕೇವಲ 50ಟಿಎಂಸಿ ನೀರು ಅದರಲ್ಲಿದೆ. ಇದರಲ್ಲಿ ಬೆಂಗಳೂರು ನಗರವೊಂದಕ್ಕೇ 35 ಟಿಎಂಸಿ ನೀರು ಕುಡಿಯಲು ಬೇಕಾಗಿದೆ. ಕಾವೇರಿಯಲ್ಲಿ, ಕಬಿನಿ ಡ್ಯಾಂನಲ್ಲಿ ನೀರಿನ ಕೊರತೆ ಇದೆ ಎಂದು ಶೋಭಾ ವಿವರಿಸಿದರು.
ಬೆಂಗಳೂರಿನ ಇಂದಿನ ಜನಸಂಖ್ಯೆಗೆ ಬೇಕಾಗುವ ಕುಡಿಯುವ ನೀರಿನ ಲೆಕ್ಕಾಚಾರವನ್ನು ಮಾಡಿಲ್ಲ. ಡ್ಯಾಂನಲ್ಲಿರುವ ಹೂಳಿನ ಬಗ್ಗೆಯೂ ವರದಿಯಲ್ಲಿ ಹೇಳಲಾಗಿಲ್ಲ. ವಿಪಕ್ಷ ಹಾಗೂ ಕನ್ನಡ ಪರ ಸಂಘಟನೆಗಳಿಗೆ ಮಾಹಿತಿ ನೀಡದೇ ಕಾವೇರಿ ಪ್ರಾಧಿಕಾರ ಸೂಚಿಸಿದಂತೆ ಸರಕಾರ 15 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಟ್ಟುಕೊಟ್ಟಿದೆ ಎಂದು ಆರೋಪಿಸಿದ ಶೋಭಾ, ಇದನ್ನು ಯಾವ ಮತ್ತು ಯಾರ ಹೆದರಿಕೆಯಿಂದ ಬಿಟ್ಟುಕೊಟ್ಟರೋ ಗೊತ್ತಿಲ್ಲ ಎಂದರು.
ನೀರು ಬಿಟ್ಟ ನಂತರ ವೈಜ್ಞಾನಿಕವಾದ ವರದಿ ಇಲ್ಲದೇ ದೆಹಲಿಗೆ ಬಂದರು. ಅಲಿ ತಮಿಳುನಾಡು ಬೇಸಾಯಕ್ಕೆ ನೀರು ಕೇಳುತ್ತಿದೆ. ತಮಿಳುನಾಡಿನಲ್ಲಿ ನಿಯಮ ಮೀರಿ 10 ಪಟ್ಟು ಹೆಚ್ಚು ಬೇಸಾಯ ಮಾಡುತ್ತಿದೆ. ಇದು ಕ್ರಿಮಿನಲ್ ಅಪರಾಧ ಎಂದು ಶೋಭಾ ನುಡಿದರು.
ವೈಜ್ಞಾನಿಕ ವರದಿ ಸಿದ್ಧಪಡಿಸದೇ ಇರುವುದರಿಂದ ನಮ್ಮ ಬೇಡಿಕೆಗಳನ್ನು ಸುಪ್ರೀಂ ಕೋರ್ಟ್ ಮುಂದೆ ಇಡುವಲ್ಲಿ ವೈಫಲ್ಯ ಕಂಡಿದ್ದೇವೆ. ವೈಜ್ಞಾನಿಕ ವರದಿ ಇಲ್ಲದೇ ತಮಿಳುನಾಡು ಸರಕಾರಕ್ಕೆ ಗೆಲುವಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ನಾವು ಎಲ್ಲಾ ಸಂದರ್ಭದಲ್ಲೂ ಕರ್ನಾಟಕ ಪರ ನಿಲ್ಲಲು ಸಿದ್ಧರಿದ್ದೇವೆ. ಕರ್ನಾಟಕ ಮತ್ತು ತಮಿಳುನಾಡುಗಳ ವಸ್ತುಸ್ಥಿತಿ ಯನ್ನು ಅಧ್ಯಯನ ಮಾಡಲು ಕೇಂದ್ರದ ತಂಡವನ್ನು ಕಳುಹಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಕೇಂದ್ರದ ತಂಡ ವೈಜ್ಞಾನಿಕ ಅಧ್ಯಯನ ನಡೆಸುತ್ತದೆ. ಈ ಎರಡು ರಾಜ್ಯಗಳೇನು ಇಂಡಿಯಾ- ಪಾಕಿಸ್ತಾನಗಳಲ್ಲ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ನುಡಿದರು.
ಕೇಂದ್ರ ಸರಕಾರ ರಾಜ್ಯ ಸರಕಾರದ ಜೊತೆ ಇದೆ. ತಮಿಳುನಾಡು ನಿಯಮ ಕ್ಕಿಂತ ಹೆಚ್ಚು ಬೇಸಾಯ ಮಾಡಿ ನೀರಿಲ್ಲ ಎನ್ನುತ್ತಿದೆ. ಕಳೆದ ಮಳೆಗಾಲದಲ್ಲಿ ಚೆನ್ನಾಗಿ ಮಳೆಯಾಗಿ ತಮಿಳುನಾಡಿಗೆ 600 ಟಿಎಂಸಿ ನೀರು ಬಿಡಲಾಗಿತ್ತು. 400ಟಿಎಂಸಿ ನೀರನ್ನು ಅದು ಸಂಗ್ರಹಿಸಿಟ್ಟು ಉಳಿದ 200 ಟಿಎಂಸಿಯನ್ನು ಸಮುದ್ರದ ಪಾಲಾಗಿತ್ತು ಎಂದ ಶೋಭಾ, ಡಿಎಂಕೆ ಹಾಗೂ ಕಾಂಗ್ರೆಸ್ ಎರಡೂ ಐಎನ್‌ಡಿಐಎ ಒಕ್ಕೂಟದಲ್ಲೇ ಇರುವುದರಿಂದ ಕಾನೂನನ್ನು ಹೊರತು ಪಡಿಸಿ ‘ಫ್ರೆಂಡ್ಲಿ ರಿಕ್ವೆಸ್ಟ್’ ಕೂಡಾ ಮಾಡಬಹುದು ಎಂದರು.