ತೆರಿಗೆ, ಕುಡಿಯುವ ನೀರಿನ ದರ ಇಳಿಕೆ: ಉಡುಪಿ ನಗರಸಭೆ ನಿರ್ಣಯ

Update: 2024-09-06 12:33 GMT

ಉಡುಪಿ: ಆಡಳಿತಾಧಿಕಾರಿಗಳ ಅವಧಿಯಲ್ಲಿ ಹೆಚ್ಚಳ ಮಾಡಲಾದ ಕುಡಿಯುವ ನೀರಿನ ದರ ಹಾಗೂ ತೆರಿಗೆಯನ್ನು ಕೂಡಲೇ ಪರಿಶೀಲಿಸಿ ಇಳಿಕೆ ಮಾಡುವ ಬಗ್ಗೆ ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಸುಂದರ್ ಕಲ್ಮಾಡಿ ನಗರಸಭೆ ಕುಡಿಯುವ ನೀರಿನ ಬಿಲ್ ಹೆಚ್ಚಳದಿಂದ ಜನಸಾಮಾನ್ಯರಿಗೆ ಬಹಳಷ್ಟು ತೊಂದರೆ ಆಗಿದೆ. ಆದುದರಿಂದ ಕೂಡಲೇ ನೀರಿನ ದರವನ್ನು ಇಳಿಕೆ ಮಾಡ ಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಸುಮಿತ್ರಾ ಆರ್. ನಾಯಕ್, ತೆರಿಗೆಯನ್ನು ಕೂಡ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಶಾಸಕ ಯಶ್‌ಪಾಲ್ ಸುವರ್ಣ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ಅದೇ ರೀತಿ ಗ್ರಾಪಂಗಳಿಂದ ಬಾಕಿ ಇರುವ 1.22ಕೋಟಿ ರೂ. ನೀರಿನ ಬಿಲ್‌ನ್ನು ಕೂಡ ವಸೂಲಿ ಮಾಡಬೇಕು ಎಂದು ಒತ್ತಾಯಿಸಲಾಯಿತು. ನಗರ ಸಭೆ ವ್ಯಾಪ್ತಿಯ ಸರಕಾರಿ ಪದವಿ ಕಾಲೇಜುಗಳಿಗೆ ಉಚಿತ ಕುಡಿಯುವ ನೀರು ಒದಗಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಅಕ್ರಮ ಕಟ್ಟಡ ತೆರವು: ಉಡುಪಿ ನಗರದ ಮಸೀದಿ ಸಮೀಪದ ಅಕ್ರಮ ಕಟ್ಟಡವನ್ನು ನಗರಸಭೆ ಯಿಂದಲೇ ತೆರವು ಗೊಳಿಸಿದ್ದು, ಇದೀಗ ಅದೇ ಜಾಗದಲ್ಲಿ ಬೇರೆ ಹೆಸರಿನ ಹೊಟೇಲ್ ಮತ್ತೆ ನಿರ್ಮಿಸಲಾಗಿದೆ. ಇಲ್ಲಿ ಒಂದು ಡೋರ್ ನಂಬರ್‌ನಲ್ಲಿ 200 ಚದರ ವಿಸ್ತ್ರೀರ್ಣದಲ್ಲಿ ಕಟ್ಟಡ ನಿರ್ಮಿಸಲು ಮಾತ್ರ ಅವಕಾಶ ಇದೆ. ಆದರೆ ಇಲ್ಲಿ ಸುಮಾರು 1000 ಚದರ ವಿಸ್ತ್ರೀರ್ಣದ ಕಟ್ಟಡವನ್ನು ಅಕ್ರಮ ವಾಗಿ ನಿರ್ಮಿಸಲಾಗಿದೆ ಎಂದು ಸ್ಥಳೀಯ ಸದಸ್ಯ ಟಿ.ಜಿ.ಹೆಗ್ಡೆ ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಈ ಹಿಂದಿನ ಪೌರಾಯುಕ್ತರು ಇಲ್ಲಿ ಕಟ್ಟಡ ನಿರ್ಮಾಣಕ್ಕೆ ಎನ್‌ಓಸಿ ನೀಡಿದ್ದಾರೆ. ಅದರಂತೆ ಒಂದು ಡೋರ್ ನಂಬರ್‌ನಲ್ಲಿ ಇಲ್ಲಿ ಹೊಟೇಲ್ ನಿರ್ಮಿಸಲಾಗಿದೆ. ನಂತರ ಅಕ್ರಮವಾಗಿ ಕಟ್ಟಡ ನಿರ್ಮಿಸಿರುವ ಬಗ್ಗೆ ನಮಗೆ ದೂರು ಬಂದ ಹಿನ್ನೆಲೆಯಲ್ಲಿ ನೋಟೀಸ್ ನೀಡ ಲಾಗಿದೆ. ಅದರಂತೆ ಇಂಜಿನಿಯರ್ ತನಿಖೆ ನಡೆಸಿ ತೆರವಿಗೆ ನೋಟೀಸ್ ಜಾರಿ ಮಾಡಲಾಗಿದೆ. ವಾರದೊಳಗೆ ಈ ಕುರಿತು ಕ್ರಮ ಜರಗಿಸಲಾಗುವುದು ಎಂದು ಹೇಳಿದರು.

ಶಿರಿಬೀಡು ವಾರ್ಡ್‌ನಲ್ಲಿನ ಅಕ್ರಮ ಕಟ್ಟಡ ನಿರ್ಮಿಸಲು ಪರಾವನಿಗೆ ಪಡೆದು ದಾರಿ ಮುಚ್ಚಿ ತಡೆಗೋಡೆ ನಿರ್ಮಿಸಲಾಗಿದೆ. ಈ ಕಟ್ಟಡಕ್ಕೆ ಅಧಿಕಾರಿಗಳು ಡೋರ್ ನಂಬರ್ ನೀಡಿದ್ದಾರೆ. ಕೂಡಲೇ ಇದರ ವಿರುದ್ಧ ಕ್ರಮ ಜರಗಿಸುವ ಬಗ್ಗೆ ಸದಸ್ಯ ಟಿ.ಜಿ.ಹೆಗ್ಡೆ ಆಗ್ರಹಿಸಿದರು. ಈಗಾಗಲೇ ಕಟ್ಟಡಕ್ಕೆ ನೋಟೀಸ್ ನೀಡಲಾಗಿದ್ದು, ಕ್ರಮ ತೆಗೆದುಕೊಳ್ಳದಿದ್ದರೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಅಧಿಕಾರಿಗಳು ಸಭೆ ತಿಳಿಸಿದರು.

ಪೊಲೀಸರ ವಿರುದ್ಧ ಕ್ರಮ: ಕಕ್ಕುಂಜೆ ವಾರ್ಡ್‌ನ ಅಕ್ರಮ ಶೆಡ್ ತೆರವಿಗೆ ಮುಂದಾಗಿದ್ದ ನಗರಸಭೆಗೆ ಸಂಬಂಧಿಸಿದ ಜೆಸಿಬಿ ಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಬಗ್ಗೆ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಮತ್ತು ಅಕ್ರಮ ಶೆಡ್ ತೆರವುಗೊಳಿಸುವ ಕುರಿತು ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಸದಸ್ಯ ವಿಜಯ ಕೊಡವೂರು ಮಾತನಾಡಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಪರ್ಯಾಯ ಸಂದರ್ಭದಲ್ಲಿ ಉಡುಪಿಗೆ 10ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಅದೇ ರೀತಿ ಕಡಲ್ಕೊರೆತ ಮತ್ತು ಮಳೆಹಾನಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಈವರೆಗೆ ಯಾವುದೇ ಅನುದಾನ ಬಂದಿಲ್ಲ ಎಂದು ದೂರಿದರು.

ನಗರಸಭೆ ಎಇಇ ದುರ್ಗಾಪ್ರಸಾದ್ ಮಾತನಾಡಿ, ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 2023ರಲ್ಲಿ 2.23ಕೋಟಿ ರೂ. ಹಾಗೂ 2024ರಲ್ಲಿ 2.61ಕೋಟಿ ರೂ. ನಷ್ಟವಾಗಿದ್ದು, ಸೇತುವೆ ಮತ್ತು ರಸ್ತೆಗಳು ಹಾನಿಯಾಗಿವೆ. ಈ ಬಗ್ಗೆ ಪರಿಹಾರ ಕ್ಕಾಗಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಈವರೆಗೆ ಬಂದಿಲ್ಲ ಎಂದು ತಿಳಿಸಿದರು.

ಚಿಟ್ಪಾಡಿ ವಾರ್ಡಿನ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಈ ಅಕ್ರಮಗಳಿಗೆ ಸಹಕಾರ ನೀಡಿದ ನಗರಸಭೆ ಮತ್ತು ನಗರ ಪ್ರಾಧಿಕಾರದ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರಗಿಸ ಬೇಕು ಎಂದು ಸದಸ್ಯ ಕೃಷ್ಣರಾವ್ ಕೊಡಂಚ ಆಗ್ರಹಿಸಿದರು. ಶಾಸಕರು ಕೂಡ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಈಗಾಗಲೇ ನೋಟೀಸ್ ನೀಡಲಾಗಿದ್ದು, ಆರು ತಿಂಗಳ ಹಿಂದೆ ಆ ಕಟ್ಟಡದ ಲೈಸನ್ಸ್ ರದ್ದು ಮಾಡಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.

ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಉಪಸ್ಥಿತರಿದ್ದರು.

ಕ್ಷಮೆಯಾಚಿಸಿದ ಪೌರಾಯುಕ್ತರು

ಅಂಬಲಪಾಡಿ ವಾರ್ಡಿನ ಸದಸ್ಯ ಹರೀಶ್ ಶೆಟ್ಟಿ ಮಾತನಾಡಿ, ನನ್ನ ಗಮನಕ್ಕೆ ತಾರದೆ ಮೂರನೇ ವ್ಯಕ್ತಿಯ ಶಿಫಾರಸ್ಸಿನಂತೆ 30-40ಲಕ್ಷ ರೂ. ಮೊತ್ತದ ರಸ್ತೆ ಕಾಮಗಾರಿಯ ಟೆಂಡರ್ ಕರೆಯಲಾಗಿದೆ. ಈ ಮೂಲಕ ಪೌರಾಯುಕ್ತರು ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ರಾಯಪ್ಪ, ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಟೆಂಡರ್‌ನ್ನು ರದ್ದುಗೊಳಿಸಿ ದ್ದೇನೆ. ಇದರಲ್ಲಿ ನಮ್ಮಿಂದ ತಪ್ಪಾಗಿದೆ. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದರು.

ತಿಂಗಳೊಳಗೆ ಇಂದ್ರಾಳಿ ಸೇತುವೆ: ಕೋಟ

ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ನಾಲ್ಕೈದು ಬಾರಿ ಸಭೆ ನಡೆಸಲಾಗಿದೆ. ಈ ತಿಂಗಳೊ ಳಗೆ ಗರ್ಡರ್ ಅಳವಡಿಸುವ ಕಾರ್ಯ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿಯನ್ನು 2025ರ ಮಾರ್ಚ್ ತಿಂಗಳೊಳಗೆ ಪೂರ್ಣ ಗೊಳಿಸುವ ಭರವಸೆ ನೀಡಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮಲ್ಪೆ- ಕರಾವಳಿ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಆದಿ ಉಡುಪಿ ಸೇರಿದಂತೆ ಹಲವು ಕಡೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಚೌತಿ ಹಬ್ಬದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗುತ್ತಿದೆ. ಪರ್ಕಳ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿ ಕೋರ್ಟ್‌ಗೆ ಹೋದವರು ವಾಪಾಸ್ಸು ಪಡೆಯುವ ಭರವಸೆ ನೀಡಿದ್ದಾರೆ ಎಂದರು. ಈ ಬಗ್ಗೆ ವಿಪಕ್ಷ ನಾಯಕ ರಮೇಶ್ ಕಾಂಚನ್ ಸಂಸದರಿಗೆ ಪ್ರಶ್ನೆಗಳನ್ನು ಕೇಳಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News