ನೇಜಾರು ನಾಲ್ವರ ಹತ್ಯೆ ಪ್ರಕರಣ | ಚಿನ್ನಾಭರಣ ಕಳವಾಗಿಲ್ಲ, ತನಿಖೆ ಚುರುಕು: ಎಸ್ಪಿ ಡಾ.ಅರುಣ್
ಉಡುಪಿ, ನ.12: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ತಾಯಿ ಹಾಗೂ ಮೂವರು ಮಕ್ಕಳ ಕೊಲೆ ಕೃತ್ಯವು ಕಳ್ಳತನದ ಉದ್ದೇಶದಿಂದ ನಡೆದಂತೆ ಕಾಣುತ್ತಿಲ್ಲ. ಮನೆಯಿಂದ ಚಿನ್ನಾಭರಣ ಕಳವಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅವರು ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಹಸೀನಾ ಮತ್ತು ಅವರ ಮಕ್ಕಳಾದ ಅಫ್ನಾನ್, ಅಯ್ನಾಝ್ ಮತ್ತು ಅಸೀಮ್ ಎಂಬವರನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿದೆ. ಹಸೀನಾರ ಅತ್ತೆ ಕೂಡಾ ದುಷ್ಕರ್ಮಿಯಿಂದ ಇರಿತಕ್ಕೊಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ನಾಲ್ವರನ್ನು ಮನೆಯ ಒಳಗಡೆಯೇ ಕೊಲೆ ಮಾಡಲಾಗಿದೆ. ಈ ನಡುವೆ ಮನೆಯಲ್ಲಿ ಯಾವುದೇ ವಸ್ತುಗಳು ಕಳವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಕಳ್ಳತನದ ಉದ್ದೇಶದಿಂದ ಕೃತ್ಯ ಎಸಗಿರುವಂತೆ ಕಾಣಿಸುತ್ತಿಲ್ಲ. ವೈಯಕ್ತಿ ಕಾರಣಕ್ಕೆ ಕೊಲೆಗಳು ನಡೆದಿರುವ ಶಂಕೆಯಿದ್ದು, ಈ ಬಗ್ಗೆ ಈಗಲೇ ಏನೂ ಹೇಳಲಾಗದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಎಸ್ಪಿ ಉತ್ತರಿಸಿದರು.
ಹಸೀನಾರ ಪತಿ ವಿದೇಶದಲ್ಲಿದ್ದಾರೆ ಎಂಬ ಮಾಹಿತಿ ಇದೆ. ಮಕ್ಕಳ ಪೈಕಿ ಇಬ್ಬರು ಮನೆಯಲ್ಲಿ ಇರುತ್ತಿದ್ದರು. ಓರ್ವ ಪುತ್ರ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಯನ್ನು ಪತ್ತೆಹಚ್ಚುವುದಾಗಿ ಎಸ್ಪಿ ತಿಳಿಸಿದ್ದಾರೆ.