ಸುಂಟರಗಾಳಿ: ಕುಂದಾಪುರ ತಾಲೂಕಿನ 12 ಮನೆ, ತೋಟಗಳಿಗೆ ಹಾನಿ

Update: 2023-08-03 12:32 GMT

ಉಡುಪಿ, ಆ.3: ಬುಧವಾರ ಬೆಳಗಿನ ಜಾವ 74 ಉಳ್ಳೂರು, ಮಚ್ಚಟ್ಟು, ಹೊಸಂಗಡಿ, ಅಜ್ರಿ, ಶಂಕರನಾರಾಯಣ ಗ್ರಾಮ ಗಳ ಆಸುಪಾಸು ಬೀಸಿದ ಸುಂಟರಗಾಳಿಗೆ 12ಕ್ಕೂ ಅಧಿಕ ಮನೆಗಳಿಗೆ ಭಾರೀ ಪ್ರಮಾಣದ ಹಾನಿ ಸಂಭವಿಸಿದ್ದರೆ, 16ಕ್ಕೂ ಅಧಿಕ ಮಂದಿಯ ವಿವಿಧ ತೋಟಗಾರಿಕಾ ಬೆಳೆಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಗೆ ಬಂದಿರುವ ಅಧಿಕೃತ ಮಾಹಿತಿಗಳಿಂದ ತಿಳಿದುಬಂದಿದೆ.

ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಬೀಸಿದ ಈ ಸುಂಟರಗಾಳಿ ಸುಮಾರು ಐದು ಕಿ.ಮೀ. ವ್ಯಾಪ್ತಿಯಲ್ಲಿ ಹಾನಿ ಯನ್ನು ಮಾಡಿದೆ. ಇದರಲ್ಲಿ ಮನೆ, ತೋಟಗಾರಿಕಾ ಬೆಳೆ, ಜಾನುವಾರು ಕೊಟ್ಟಿಗೆ, ದಾಸ್ತಾನು ಕೊಟ್ಟಿಗೆ, ಕೃಷಿ ಬೆಳೆಯೂ ಸೇರಿವೆ. ಅಧಿಕೃತವಾಗಿ ಸಿಕ್ಕಿರುವ ಪ್ರಾಥಮಿಕ ಮಾಹಿತಿಗಳಂತೆ 20 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.

ಗಾಳಿಯ ರಭಸಕ್ಕೆ ಹಲವಾರು ಮನೆಗಳ ಮೇಲ್ಚಾವಣಿ, ಸಿಮೆಂಟ್ ಸೀಟುಗಳು ಹಾರಿ ದೂರಹೋಗಿ ಬಿದ್ದಿವೆ. ಸಾವಿರಾರು ಅಡಿಕೆ, ಬಾಳೆ, ಗೇರು, ಹಲಸು ಹಾಗೂ ಮಾವಿನ ಮರಗಳು ಬುಡಸಹಿತ ಧರಾಶಾಹಿಯಾಗಿವೆ. ಒಂದೆರಡು ನಾಗಬನ ಗಳಿಗೂ ಹಾನಿಯಾದ ವರದಿಗಳಿವೆ.

74 ಉಳ್ಳೂರು ಗ್ರಾಮದ ಜಯಕರ ಶೆಟ್ಟಿ, ಪಾರ್ವತಿ ಶೆಡ್ತಿ, ಸುಮತಿ ಶೆಡ್ತಿ, ರತ್ನಾಕರ, ನೀಲು ಪೂಜಾರ್ತಿ, ಗಿರಿಜ, ಅಣ್ಣಪ್ಪ ಪೂಜಾರಿ, ಮೊಳಹಳ್ಳಿಯ ಪದ್ಮಾವತಿ, ಶಂಕರನಾರಾಯಣ ಗ್ರಾಮದ ಸುಬ್ಬ ನಾಯ್ಕ, ಹೊಸಂಗಡಿಯ ಪಾರ್ವತಿ, ಹಕ್ಲಾಡಿಯ ಚಿಕ್ಕು ಇವರ ವಾಸ್ತವ್ಯದ ಮನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಗಿದೆ.

ಇದರೊಂದಿಗೆ 74 ಉಳ್ಳೂರು ಗ್ರಾಮದ ಜಯಕರ ಶೆಟ್ಟಿ, ಪಾರ್ವತಿ ಶೆಡ್ತಿ, ರಾಮ ನಾಯ್ಕ, ನಾರಾಯಣ ಶೆಟ್ಟಿ, ಸುಮತಿ ಶೆಡ್ತಿ, ರತ್ನಾಕರ ಶೆಟ್ಟಿ, ದಿವಾಕರ ಶೆಟ್ಟಿ, ಕಲಾವತಿ ಶೆಡ್ತಿ, ಶಂಕರ ಶೆಟ್ಟಿ, ಮಹಾಬಲ ನಾಯ್ಕ, ಉದಯ ಪೂಜಾರಿ, ವನಜಾ ಆಚಾರ್ತಿ, ಮಚ್ಚಟ್ಟು ಗ್ರಾಮದ ರತ್ನ, ಲಕ್ಷ್ಮೀನಾರಾಯಣ, ಕೃಷ್ಣ ಆಚಾರಿ, ಆಜ್ರಿ ಗ್ರಾಮದ ಮುಕಾಂಬು ಇವರ ತೋಟ ಗಾರಿಕಾ ಬೆಳೆಗಳಿಗೆ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.

74 ಉಳ್ಳೂರು ಗ್ರಾಮದ ಪಾರ್ವತಿ ಶೆಡ್ತಿ ಇವರ ಮನೆಯ ಜಾನುವಾರು ಕೊಟ್ಟಿಗೆ ಹಾನಿ ಸಂಭವಿಸಿದೆ. ಉಳಿದಂತೆ ಕಾಪು ತಾಲೂಕು ತೆಂಕ ಗ್ರಾಮದ ರಮೇಶ್ ಸೇರಿಗಾರ್ ಎಂಬವರ ಮನೆಯ ಗೋಡೆ ಕುಸಿದು 1.5 ಲಕ್ಷ ರೂ. ನಷ್ಟ ಸಂಭವಿಸಿ ದ್ದರೆ, ಹೆಬ್ರಿ ತಾಲೂಕು ಚಾರಾದ ನಾರಾಯಣ ಶೆಟ್ಟಿ ಇವರ ಭತದ ಬೆಳೆಗೆ ಅಪಾರ ಹಾನಿ ಸಂಭವಿಸಿದೆ.

ಕಾರ್ಕಳ ಕುಕ್ಕಂದೂರು ಗ್ರಾಮದ ಜಯಂತಿ ಎಂಬವರ ಮನೆ ಮೇಲೆ ಮರ ಬಿದ್ದು 75,000ರೂ. ನಷ್ಟ ಸಂಭವಿಸಿದ್ದರೆ, ಹೆಬ್ರಿಯ ಕುಚ್ಚೂರು ಗ್ರಾಮದ ತಿಮ್ಮಪ್ಪ ಆಚಾರಿ ಇವರ ಮನೆ ಗಾಳಿ-ಮಳೆಗೆ ಸಂಪೂರ್ಣ ಕುಸಿದಿದ್ದು ಮೂರು ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.

10.2ಮಿ.ಮೀ. ಮಳೆ: ಜಿಲ್ಲೆಯಲ್ಲಿ ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಸರಾಸರಿ 10.2ಮಿ.ಮೀ. ಮಳೆ ಯಾಗಿದೆ. ಉಡುಪಿಯಲ್ಲಿ 3.3, ಬ್ರಹ್ಮಾವರ 5.2, ಕಾಪು 1.9, ಕುಂದಾಪುರ 15.7, ಬೈಂದೂರು 14.7, ಕಾರ್ಕಳ 6.9 ಹಾಗೂ ಹೆಬ್ರಿಯಲ್ಲಿ 12.4ಮಿ.ಮೀ. ಮಳೆಯಾದ ವರದಿ ಬಂದಿದೆ.

ಬಿರುಗಾಳಿಯ ಎಚ್ಚರಿಕೆ: ಉಡುಪಿ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ನಾಳೆಯವರೆಗೆ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದುದರಿಂದ ಸಾರ್ವಜನಿಕರು ಸಮುದ್ರ, ನದಿ ತೀರ ಪ್ರದೇಶಗಳಲ್ಲಿ, ಹಳ್ಳ-ಕೊಳ್ಳಗಳಲ್ಲಿ ಇಳಿಯುವುದನ್ನು ನಿಷೇಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News