ಮೀನುಗಾರ ಸಹಕಾರಿಗಳಿಗೆ ಆಡಳಿತ ನಿರ್ವಹಣಾ ತರಬೇತಿ ಶಿಬಿರ

Update: 2023-08-08 11:28 GMT

ಉಡುಪಿ: ಕರ್ನಾಟಕ ರಾಜ್ಯ ಸಹಾಕರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯಕಾರ್ಯ ನಿರ್ವಹಕರಿಗೆ ಆಡಳಿತ ನಿರ್ವಹಣಾ ತರಬೇತಿ ಶಿಬಿರವನ್ನು ಮಂಗಳವಾರ ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಶಿಬಿರವನ್ನು ಉದ್ಘಾಟಿಸಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಕರಾವಳಿ ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರ ಉತ್ತಮವಾಗಿ ಸೇವೆ ನೀಡುತ್ತಿದೆ. ಆದರೆ ಸಹಕಾರಿ ಹಾಗೂ ಮೀನುಗಾರಿಕೆ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿಗಳ ಕೊರತೆ ಎದುರಿಸುವಂತಾಗಿದೆ. ಇಲ್ಲಿರುವ ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಾದರೆ ಇಲಾಖೆಗಳಿಗೆ ಪೂರ್ಣ ಪ್ರಮಾಣದ ಸಿಬಂದಿಗಳ ನೇಮಕ ಮಾಡಬೇಕು ಎಂದು ಹೇಳಿದರು.

ಕರಾವಳಿ ಭಾಗದ ಆರ್ಥಿಕತೆಗೆ ಮೀನುಗಾರರ ಕೊಡುಗೆಯೂ ಅಪಾರವಿದೆ. ಯುವ ಪೀಳಿಗೆ ಇದರಲ್ಲಿ ತೊಡಗಿಸುವಂತಾ ಗಲು ಅವರಿಗೆ ಆರ್ಥಿಕ ಬೆಂಬಲ ನೀಡುವ ಕೆಲಸವಾಗಬೇಕು. ಸ್ವಾತಂತ್ರ್ಯ ಪೂರ್ವದ ಸಹಕಾರ ಸಂಘಗಳನ್ನು ಉಳಿಸಿ ಬೆಳೆಸುವ ಜತೆಗೆ ಮೀನುಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಕಾನೂನು ಚೌಕಟ್ಟು ವ್ಯಾಪ್ತಿಯಲ್ಲಿ ಸಹಕಾರಿ ಇಲಾಖೆಯ ಕಾರ್ಯಕ್ರಮಗಳು ಯಶಸ್ವಿ ಯಾಗಲು ಸಾಧ್ಯವಿದೆ. ಕೇಂದ್ರ ಮೀನುಗಾರಿಕೆ ಸಚಿವಾಲಯದ ಮೂಲಕ ಹಲ ವಾರು ಯೋಜನೆಗಳಿದ್ದು, ಇವುಗಳನ್ನು ತಿಳಿದುಕೊಂಡು ಅನುಷ್ಠಾನಗೊಳಿಸ ಬೇಕು ಎಂದರು.

ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ಉಡುಪಿ ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಟಿ.ಅಂಜನಾ ದೇವಿ ಮೀನುಗಾರಿಕೆ ಇಲಾಖೆಯ ಯೋಜನೆಗಳ ಬಗ್ಗೆ ಮತ್ತು ದ.ಕ. ಸಹಕಾರ ಸಂಘಗಳ ಉಪನಿಬಂಧಕ ಕಚೇರಿಯ ಅಧೀಕ್ಷಕ ಎನ್.ಜೆ.ಗೋಪಾಲ್ ‘ಸಹಕಾರ ಸಂಘಗಳ ಇತ್ತೀಚಿನ ಕಾಯ್ದೆ ತಿದ್ದುಪಡಿ ಒಳಗೊಂಡಂತೆ ಆಡಳಿತ ಮಂಡಳಿ ಸದಸ್ಯರ ಅಧಿಕಾರ ಮತ್ತು ಜವಾಬ್ದಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಕರ್ತವ್ಯಗಳು, ಸಹಕಾರ ಸಂಘಗಳ ಚುನಾವಣೆ ನಡೆಸುವ ವಿಧಾನಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ., ಯೂನಿಯನ್ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ಆಡಳಿತ ಮಂಡಳಿ ಸದಸ್ಯರಾದ ಕೆ.ಕೊರಗ ಪೂಜಾರಿ, ಕೆ.ಸುರೇಶ್ ರಾವ್, ಕಟಪಾಡಿ ಶಂಕರ್ ಪೂಜಾರಿ, ಮನೋಜ್ ಎಸ್.ಕರ್ಕೇರ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಕೆ.ಸುರೇಶ್ ರಾವ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪಕೋಡಿಹಳ್ಳಿ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News