ಕಾರ್ಕಳ: ಮೀನು ಹಿಡಿಯಲು ಹೋದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

Update: 2024-05-19 16:17 GMT

ಕಾರ್ಕಳ: ಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕ ಸೇರಿದಂತೆ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ಠಾಣಾ ವ್ಯಾಪ್ತಿಯ ಶಿರ್ಲಾಲು ಗ್ರಾಮದ ಮದೆಲ್ಕಡಿ ಸಮೀಪ ಉಬ್ರೇಲುಗುಂಡಿ ಎಂಬಲ್ಲಿ ಮೇ 19ರಂದು ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಬಜಗೋಳಿ ಸಮೀಪದ ಕೆರುವಾಶೆ ನಿವಾಸಿ ಹರೀಶ್ ಪೂಜಾರಿ ಹಾಗೂ ಹರಿಣಿ ದಂಪತಿ ಪುತ್ರ ರಿತೇಶ್(18) ಮತ್ತು ಹರಿಣಿ ಅವರ ಅಣ್ಣ ಶಿರ್ಲಾಲು ನಿವಾಸಿ ಹರೀಶ್ ಪುಜಾರಿ(48) ಎಂದು ಗುರುತಿಸಲಾಗಿದೆ. ಹರಿಣಿ, ತನ್ನ ಮಕ್ಕಳಿಗೆ ಶಾಲೆ ರಜೆಯ ಹಿನ್ನೆಲೆಯಲ್ಲಿ ಶಿರ್ಲಾಲುವಿನಲ್ಲಿರುವ ತನ್ನ ತವರು ಮನೆಗೆ ಬಂದಿದ್ದರು.

ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿ ಹರಿಣಿ, ರಿತೇಶ್ ಹಾಗೂ ಹರೀಶ್ ಮನೆ ಸಮೀಪದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಸರಿಯಾಗಿ ಈಜು ಬಾರದ ರಿತೇಶ್ ಮೀನಿನ ಬಲೆ ಹಿಡಿದುಕೊಂಡು ಕೆರೆಯ ಮಧ್ಯ ಭಾಗಕ್ಕೆ ಹೋದನು. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಬಂದಿರುವುದರಿಂದ ಕೆರೆಯಲ್ಲಿ ನೀರು ಹೆಚ್ಚಾಗಿದ್ದು, ಇದರಿಂದ ಕೆರೆಯಲ್ಲಿ ಬಲೆ ಹಾಕುತ್ತಿದ್ದ ರಿತೇಶ್ ಕೆಸರಿನಲ್ಲಿ ಸಿಲುಕಿ ಮುಳುಗಿದ್ದಾನೆ ಎನ್ನಲಾಗಿದೆ.

ಇದನ್ನು ಕಂಡ ಹರೀಶ್ ಪೂಜಾರಿ, ರಿತೇಶ್‌ನನ್ನು ರಕ್ಷಿಸಲು ನೀರಿಗೆ ಇಳಿದರು. ಮಳೆಯಿಂದ ಕೆರೆಯಲ್ಲಿ ನೀರು ಹೆಚ್ಚು ಇದ್ದುದರಿಂದ ಇಬ್ಬರೂ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿ ಹರಿಣಿ ಅವರ ಕಣ್ಣೇದುರೇ ಮಗ ಮತ್ತು ತಮ್ಮ ಪ್ರಾಣ ಕಳೆದುಕೊಂಡರು. ಕೂಡಲೇ ಮಾಹಿತಿ ತಿಳಿದು ಆಗಮಿಸಿದ ಸ್ಥಳೀಯರು ಮೃತದೇಹವನ್ನು ಮೇಲಕ್ಕೆ ಎತ್ತಿದರು.

ಕಾರ್ಕಳದ ಕ್ರಿಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು, ಇತ್ತೀಚೆಗೆ ಬಂದ ಫಲಿತಾಂಶದಲ್ಲಿ ಆತ ಉತ್ತೀರ್ಣನಾಗಿದ್ದನು. ಹರೀಶ್ ಪೂಜಾರಿಯವರು ಸ್ಥಳೀಯವಾಗಿ ಕೂಲಿ ಕೆಲಸ ಮಾಡಿ ಕೊಂಡಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News