ಉಡುಪಿ: ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ; ಪೊಕ್ಸೋ ಆರೋಪಿಗೆ 10 ವರ್ಷ ಕಠಿಣ ಜೈಲುಶಿಕ್ಷೆ
ಉಡುಪಿ, ಆ.4: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷಗಳ ಹಿಂದೆ ನಡೆದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯವು ಆರೋಪಿಗೆ 10ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಕೋಟದ ನಿವಾಸಿ ವಿಘ್ನೇಶ್ ನಾಯ್ಕ(30) ಶಿಕ್ಷೆಗೆ ಗುರಿಯಾದ ಆರೋಪಿ.
ಈತ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ 17 ಹರೆಯದ ನೊಂದ ಬಾಲಕಿಯ ಮನೆಗೆ ಬಾವಿ ಕೆಲಸಕ್ಕೆ ಬಂದಿದ್ದು, ಈ ವೇಳೆ ನೊಂದ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದನು. ಬಳಿಕ ಬಾಲಕಿಗೆ ಫೋನ್ ಮೂಲಕ ಸಂದೇಶ ಕಳುಹಿಸಿ ಪ್ರೀತಿ ಮಾಡುವಂತೆ ಒತ್ತಾಯಿಸಿ ಹಿಂಬಾಲಿಸುತ್ತಿದ್ದನು.
2018ರ ಡಿಸೆಂಬರ್‌ನಲ್ಲಿ ಶಾಲೆ ಬಿಟ್ಟು ಮನೆಗೆ ಒಬ್ಬಳೇ ನಡೆದುಕೊಂಡು ಬರುತ್ತಿದ್ದ ಬಾಲಕಿಯನ್ನು ಆರೋಪಿ ದಾರಿ ಮಧ್ಯೆ ಸರಕಾರಿ ಹಾಡಿಗೆ ಎಳೆದು ಕೊಂಡು ಹೋಗಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದನು. ಈ ವಿಚಾರವನ್ನು ಯಾರಲ್ಲಾ ದರೂ ಹೇಳಿದರೆ ತಾಯಿ, ತಮ್ಮನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಅದರಂತೆ ನೊಂದ ಬಾಲಕಿ ಈ ವಿಚಾರವನ್ನು ಯಾರ ಬಳಿ ಕೂಡ ಹೇಳಿರಲಿಲ್ಲ.
ಬಳಿಕ ತನ್ನ ಶಾಲೆಯಲ್ಲಿ 1098 ಮಕ್ಕಳ ಸಹಾಯವಾಣಿಯ ನಂಬರ್ ತಿಳಿದು ಕೊಂಡು ಸಹಾಯ ವಾಣಿಗೆ ಕರೆ ಮಾಡಿ ಮಾಹಿತಿ ನೀಡಿದಳು. ಆಗಿನ ಮಕ್ಕಳ ರಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ನೊಂದ ಬಾಲಕಿಯನ್ನು ರಕ್ಷಿಸಿ ಆರೋಪಿ ವಿರುದ್ಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ನಡೆಸಿದ ಆಗಿನ ಪೊಲೀಸ್ ನಿರೀಕ್ಷಕ ಜಯಂತ್ ಎಂ. ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಅದರಂತೆ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿ ವಿರುದ್ಧ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಆರೋಪಿಗೆ 10ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಟ್ಟು 21,500ರೂ. ದಂಡ ವಿಧಿಸಿದ್ದಾರೆ. ದಂಡ ಹಣದಲ್ಲಿ 5ಸಾವಿರ ರೂ. ಸರಕಾರಕ್ಕೆ ಮತ್ತು 16,500ರೂ. ನೊಂದ ಬಾಲಕಿಗೆ ಪರಿಹಾರವಾಗಿ ನೀಡಬೇಕು. ಸಂತ್ರಸ್ತೆಗೆ 2ಲಕ್ಷ ರೂ. ಪರಿಹಾರ ವಾಗಿ ನೀಡುವಂತೆ ನಿರ್ದೇಶನ ನೀಡಿ ಸರಕಾರಕ್ಕೆ ಆದೇಶಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.