ಉಡುಪಿ: ರಾತ್ರಿಯ ಶುಭ್ರಾಕಾಶದಲ್ಲಿ ಉಲ್ಕೆಗಳ ವರ್ಷಧಾರೆ
ಉಡುಪಿ, ಡಿ.14: ಪ್ರತೀ ವರ್ಷ ಡಿಸೆಂಬರ್ ತಿಂಗಳ ಮಧ್ಯ ಭಾಗದಲ್ಲಿ ಗೋಚರಿಸುವ ಮಿಥುನ ರಾಶಿಯಿಂದ ಚಿಮ್ಮುವ ಜೆಮಿನಿಡ್ ಉಲ್ಕಾಪಾತ ಇಂದು ಮತ್ತು ನಾಳೆ ಎರಡು ದಿನ ಮಧ್ಯರಾತ್ರಿಯಿಂದ ವಿಜೃಂಭಿಸಲಿದೆ.
ವರ್ಷದಲ್ಲಿ ಸುಮಾರು 22 ಉಲ್ಕಾಪಾತಗಳು ಸಂಭವಿಸುವವಾದರೂ ಎಲ್ಲವೂ ಚೆನ್ನಾಗಿರುವುದಿಲ್ಲ. ಉಲ್ಕೆಗಳ ಸಂಖ್ಯೆ ಹೆಚ್ಚೇನೂ ಇರುವುದಿಲ್ಲ. ಆದರೆ ಗುರುವಾರ ಮತ್ತು ಶುಕ್ರವಾರಗಳಂದು ಗಂಟೆಗೆ ಸುಮಾರು ನೂರಕ್ಕಿಂತಲೂ ಅಧಿಕ ಬಣ್ಣಬಣ್ಣದ ಉಲ್ಕೆಗಳನ್ನು ಆಕಾಶದಿಂದ ಕೆಳಗೆ ಉದುರುವುದನ್ನು ನೋಡಿ ಆನಂದಿಸಬಹುದು ಎಂದು ಖ್ಯಾತ ಖಭೌತ ವಿಜ್ಞಾನಿ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎ.ಪಿ. ಭಟ್ ತಿಳಿಸಿದ್ದಾರೆ.
ಈ ಉಲ್ಕೆಗಳಲ್ಲಿ ಹೆಚ್ಚಿನವು ಸೂರ್ಯನ ಸುತ್ತ ಸುತ್ತುವ ಧೂಮಕೇತುಗಳ ಧೂಳು. ಆದರೆ ಇಂದಿನ ಜೆಮಿನಿಡ್ ಹಾಗಲ್ಲ. ಇದೊಂದು ದೀರ್ಘ ವೃತ್ತಾಕಾರದಲ್ಲಿ ಸೂರ್ಯನನ್ನು ಸುತ್ತುವ ಸುಮಾರು 6 ಕಿಮೀ ಗಾತ್ರದ ಕಲ್ಲುಂಡೆಯ, 3200 ಪೇಥಾನ್ ಅಸ್ಟೆರೊಯ್ಡ್‌ನ ಧೂಳು.
ರಾತ್ರಿ ಸುಮಾರು 1 ಗಂಟೆಗೆ ನಡು ನೆತ್ತಿಗೆ ಬರುವ ಮಿಥುನ ರಾಶಿಯಿಂದ ಗಂಟೆಗೆ 120 ಉಲ್ಕೆಗಳನ್ನು ಗುರುತಿಸಬಹು ದೆಂದು ಅಂದಾಜಿಸಲಾಗಿದೆ. ಬೇರೆಲ್ಲಾ ಉಲ್ಕಾಪಾತಗಳಿಗಿಂತ ಇದು ವಿಭಿನ್ನ. ಇಂದು ಎಲ್ಲಾ ಬಣ್ಣಗಳ ಉಲ್ಕೆಗಳನ್ನೂ ನೋಡಬಹುದು. ಬಿಳಿ, ಕೆಂಪು, ಹಳದಿ, ಹಸಿರು ಹಾಗೂ ನೀಲಿ.
ಆಕಾಶದಿಂದ ಕೆಳಕ್ಕೆ ಬೀಳುವಾಗ ನಮ್ಮ ಮೇಲೆಯೇ ಬಿತ್ತು ಅಂತ ಅನಿಸುವ ಈ ಉಲ್ಕಾಪಾತಗಳು ಹಾಗೇನೂ ಅಲ್ಲ. ಭೂಮಿಯ ವಾತಾವರಣದಿಂದಾಗಿ ಸುಮಾರು 60- 70 ಕಿಮಿ ಎತ್ತರದ ಆಕಾಶದಲ್ಲೇ ಈ ಧೂಳಿನ ಕಣಗಳು ಘರ್ಷಣೆಯಿಂದ ಉರಿದು ಹೋಗುತ್ತವೆ.
ಮಿಥುನ ರಾಶಿಯೇ ನೋಡಲು ಚೆಂದ. ಮಹಾವ್ಯಾಧ ನಕ್ಷತ್ರ ಪುಂಜವೇ ಚೆಂದ. ಅದರ ಪಕ್ಕ ಇರುವ ಪುನರ್ವಸು ನಕ್ಷತ್ರ ನೋಡಲು ಇನ್ನೂ ಚೆಂದ. ಅದರಲ್ಲೂ ಇದೀಗ ಸಿಡಿಯಬಹುದಾದ ಬೃಹತ್ ಆರ್ದ್ರಾ ನಕ್ಷತ್ರ, ರೆಡ್ ಸೂಪರ್ ಜಯಂಟ್.
ಆಕಾಶವೀಕ್ಷಣೆಯ ಹವ್ಯಾಸ ಉಳ್ಳ ಆಸಕ್ತ ಖಗೋಳಶಾಸ್ತ್ರಜ್ಞರಿಗೆ ಎರಡು ದಿನ ಆಕಾಶವನ್ನು ಗಮನಿಸಲು ಒಳ್ಳೆಯ ಅವಕಾಶ. ಆಕಾಶಕಾಯಗಳೊಂದಿಗೆ ಎರಡು ದಿನ ಆಕಾಶದ ಈ ಉಲ್ಕಾಪಾತದ ದುರುಸಿನ ಆಟವನ್ನು ನೋಡಿ ಖುಷಿ ಪಡುವಂತೆ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.