ಉಡುಪಿ: ಆರೋಗ್ಯ, ಶಿಕ್ಷಣ ಸೂಚ್ಯಂಕದಲ್ಲಿ ಕುಸಿತ; ಸಿಎಂ ಸಿದ್ದರಾಮಯ್ಯ ಗರಂ

Update: 2023-08-01 15:17 GMT

ಉಡುಪಿ, ಆ.1: ಕೆಲವೇ ವರ್ಷಗಳ ಹಿಂದೆ ರಾಜ್ಯದ ಶಿಕ್ಷಣ ಹಾಗೂ ಆರೋಗ್ಯ ಸೂಚ್ಯಂಕಗಳಲ್ಲಿ ಅಗ್ರಸ್ಥಾನದಲ್ಲಿರುತಿದ್ದ ಉಡುಪಿ ಜಿಲ್ಲೆ ಕಳೆದೆರಡು ವರ್ಷಗಳಿಂದ ಕಳಪೆ ನಿರ್ವಹಣೆ ಮೂಲಕ ತೀರಾ ಕೆಳಗಿನ ಸ್ಥಾನ ಪಡೆದಿರುವುದು ಇಂದಿನ ಪ್ರಗತಿ ಪರಿಶೀಲನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಂಗೆಣ್ಣಿಗೆ ಗುರಿಯಾಯಿತು.

ಎರಡು ಇಲಾಖೆಗಳ ಮುಖ್ಯಸ್ಥರನ್ನು ಈ ಬಗ್ಗೆ ಚೆನ್ನಾಗಿ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳು ಮುಂದಿನ ಅವಧಿ ವೇಳೆಗೆ ನಿಮ್ಮ ಮತ್ತು ಜಿಲ್ಲೆಯ ಕಾರ್ಯಕ್ಷಮತೆಯಲ್ಲಿ ಪ್ರಗತಿ ಕಾಣದಿದ್ದರೆ ನಿಮ್ಮನ್ನು ಶಾಶ್ವತವಾಗಿ ಮನೆಗೆ ಕಳಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆರೋಗ್ಯ ಇಲಾಖೆ: ಒಂದು ದಶಕದ ಹಿಂದಿನವರೆಗೆ ಉಡುಪಿ ಜಿಲ್ಲೆ ಆರೋಗ್ಯ ಸೂಚ್ಯಂಕದಲ್ಲಿ ದೇಶದಲ್ಲೇ ಅಗ್ರಸ್ಥಾನ ಪಡೆದಿತ್ತು. ಜಿಲ್ಲೆಯಲ್ಲಿ ತಾಯಿ-ಮಗುವಿನ ಮರಣ ಸಂಖ್ಯೆ ಇಡೀ ದೇಶದಲ್ಲೇ ಕನಿಷ್ಠ ಆಗಿತ್ತು. ಪ್ರಸ್ತುತ ಜಿಲ್ಲೆಯು ಆರೋಗ್ಯ ಸೇವೆ ಸೂಚ್ಯಂಕದಲ್ಲಿ 18ನೇ ಸ್ಥಾನದಲ್ಲಿದೆ. ಆದರೆ ಹಿಂದೆ ನಮ್ಮ ಸರ್ಕಾರದ 2015ರ ಅವಧಿಯಲ್ಲಿ ಜಿಲ್ಲೆಯು ಮೊದಲನೇ ಸ್ಥಾನದಲ್ಲಿತ್ತು. ಇದು ನಿಮ್ಮ ಉದಾಸೀನತೆಯನ್ನು ತೋರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಮತ್ತೆ ಜಿಲ್ಲೆಯನ್ನು 1ನೇ ಸ್ಥಾನಕ್ಕೆ ತರಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಶ್ರಮವಹಿಸಿ ಕೆಲಸ ಮಾಡಬೇಕು ಎಂದರು.

2015-16ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 14 ತಾಯಿ ಮರಣ ಸಂಭವಿಸಿದ್ದರೆ, 2021-22ನೇ ಸಾಲಿನಲ್ಲಿ ಇಂದು 126ಕ್ಕೇರಿದೆ. 2022-23ನೇ ಸಾಲಿನಲ್ಲಿ ಇದುವರೆಗೆ 53 ಮರಣ ಸಂಭವಿಸಿದೆ. ಇನ್ನು ಮಕ್ಕಳ ಮರಣದ ವಿವರ ನೋಡಿದರೆ 2015-16ನೇ ಸಾಲಿನಲ್ಲಿ 51 ನವಜಾತ ಶಿಶು ಸಾವನ್ನಪ್ಪಿದರೆ, 2022-23ನೇ ಸಾಲಿನಲ್ಲಿ ಇದು 166ಕ್ಕೇರಿದೆ ಎಂದು ವಿವರಿಸಿದ ಮುಖ್ಯಮಂತ್ರಿಗಳು ಇದಕ್ಕಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಉಡುಪಿ ಸುಶಿಕ್ಷಿತರ ಜಿಲ್ಲೆ. ಆರೋಗ್ಯ ಸೂಚ್ಯಂಕದಲ್ಲಿ ಈ ಪ್ರಮಾಣದ ಕುಸಿತ ಕಂಡಿರುವುದಕ್ಕೆ ನಿಮ್ಮ ಹೊಣೆಗಾರಿಕೆ ಇಲ್ಲವಾ ಎಂದು ಡಿಹೆಚ್‌ಒ ಅವರನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು ಜಿಲ್ಲೆಯನ್ನು ಮತ್ತೆ ಮೊದಲ ಸ್ಥಾನಕ್ಕೆ ತರಬೇಕು. ಇಲ್ಲದಿದ್ದರೆ ಸಸ್ಪೆಂಡ್ ಆಗಬೇಕಾಗುತ್ತದೆ ಎಂದು ಎಚ್ಚರಿಸಿದ ಬಳಿಕ ಪಕ್ಕದಲ್ಲೇ ಇದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಈ ಬಗ್ಗೆ ನಿಗಾ ವಹಿಸಿ ಸುಧಾರಣೆ ಕಾಣದಿದ್ದರೆ ಡಿಹೆಚ್‌ಒ ಅವರನ್ನು ಮುಲಾಜಿಲ್ಲದೆ ಸಸ್ಪೆಂಡ್ ಮಾಡಿ ಎಂದು ಸೂಚಿಸಿದರು.

ಶಿಕ್ಷಣ ಇಲಾಖೆ: ಶೈಕ್ಷಣಿಕ ಸೂಚ್ಯಂಕದಲ್ಲಿ 2017ರಿಂದ 2019 ರವರೆಗೆ ಮೊದಲ ಹಾಗೂ ಎರಡನೇ ಸ್ಥಾನ ಹೊಂದಿದ ಜಿಲ್ಲೆಯು 13ನೇ ಸ್ಥಾನಕ್ಕೆ ಕುಸಿತಗೊಂಡಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸಿಎಂ, ಮುಂದಿನ ಅವಧಿಯೊಳಗೆ ಜಿಲ್ಲೆಯ ಸೂಚ್ಯಂಕದಲ್ಲಿ ಪ್ರಗತಿ ಕಾಣದೇ ಇದ್ದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದರು.

2014ರಲ್ಲಿ 14ನೇ ಸ್ಥಾನದಲ್ಲಿ ಉಡುಪಿ, 2015 ಮತ್ತು 2016ರಲ್ಲಿ 2ನೇ, 2017 ಮತ್ತು 2018ರಲ್ಲಿ ಮೊದಲ ಸ್ಥಾನದಲ್ಲಿತ್ತು. 2020ರಲ್ಲಿ 7ನೇ ಸ್ಥಾನ ಪಡೆದ ಉಡುಪಿ, 2022ನೇ ಸ್ಥಾನಕ್ಕೆ ಕುಸಿಯಿತು. 2023ರಲ್ಲಿ ಅದು 13ನೇ ಸ್ಥಾನ ಹೊಂದಿದೆ ಎಂದು ಅಂಕಿಅಂಶ ನೀಡಿದರು.

10ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ ಹೊಂದಿರುವ ಶಾಲೆಯನ್ನು ಸಮೀಪದ ಶಾಲೆಗಳಿಗೆ ಒಂದುಗೂಡಿಸಿ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದರೊಂದಿಗೆ ರಾಜ್ಯಕ್ಕೆ ಮಾದರಿ ಆಗುವ ರೀತಿಯಲ್ಲಿ ಮಾಡಬೇಕು ಎಂದರು.

ಅಪಘಾತ, ಸಾವಿಗೆ ಕಳವಳ: ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ 2808 ರಸ್ತೆ ಅಪಘಾತವಾಗಿ, 543 ಜನ ಮರಣ ಹೊಂದಿರುತ್ತಾರೆ. ಇದಕ್ಕೆಲ್ಲ ಏನು ಕಾರಣ ಎಂದು ಪ್ರಶ್ನಿಸಿದ ಅವರು, ಲೊಕೋಪಯೋಗಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚರವಹಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸೈಬರ್ ಕ್ರೈಮ್ ಪ್ರಕರಣಗಳು ಕಂಡು ಬರುತ್ತಿವೆ. ಇದರಿಂದ ಕಾನೂನು ಸುವ್ಯವಸ್ಥೆ ಸರಿ ಇಲ್ಲದಂತಾಗಿದೆ. ಪೊಲೀಸ್ ಇಲಾಖೆಯು ದಿನದ 24 ಗಂಟೆಯೂ ಕೆಲಸ ನಿರ್ವಹಿಸಿ, ಈ ರೀತಿ ಆಗುವುದು ಸರಿಯಲ್ಲ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಜುಲೈನಲ್ಲಿ ಶೇ.25 ಅಧಿಕ ಮಳೆ: ಉಡುಪಿ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಶೇ.53ರಷ್ಟು ಮಳೆಯ ಕೊರತೆ ಕಂಡುಬಂದಿದ್ದರೆ, ಜುಲೈ ತಿಂಗಳಲ್ಲಿ ಶೇ.25ರಷ್ಟು ಅಧಿಕ ಮಳೆಯಾಗಿದೆ ಎಂದರು. ಜುಲೈ ತಿಂಗಳ ವಾಡಿಕೆ ಮಳೆ 1106ಮಿ.ಮೀ ಆಗಿದ್ದರೆ, ಈ ಬಾರಿ 519ಮಿ.ಮೀ. ಮಳೆ ಮಾತ್ರ ಸುರಿ ದಿದೆ. ಹೀಗಾಗಿ ಶೇ.53ರಷ್ಟು ಕೊರತೆಯಾಗಿದೆ. ಇನ್ನು ಜುಲೈ ತಿಂಗಳಲ್ಲಿ ವಾಡಿಕೆ ಮಳೆ 1448ಮಿ.ಮೀ. ಆದರೆ, ನಿನ್ನೆಯವರೆಎ 1805ಮಿ.ಮೀ. ಮಳೆ ಬಂದಿದೆ. ಇದರಿಂದ ಈ ಬಾರಿ ಶೇ.25ರಷ್ಟು ಹೆಚ್ಚು ಮಳೆ ಸುರಿದಿದೆ. ಇದರಿಂದ ಈ ಬಾರಿ ಶೇ.79ರಷ್ಟು ಬೇಸಾಯ ಮುಗಿದಿದೆ. ಜಿಲ್ಲೆಯಲ್ಲಿ ಬೀಜ, ರಾಸಾಯನಿಕ ಗೊಬ್ಬರಗಳಿಗೆ ಯಾವುದೇ ಕೊರತೆಯಾಗಿಲ್ಲ ಎಂದರು.

ಈ ಬಾರಿ ಮಳೆ ಹಾಗೂ ಪ್ರಾಕೃತಿಕ ವಿಕೋಪಕ್ಕೆ ಒಟ್ಟು 10 ಮಂದಿ ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಇಬ್ಬರು ಕಾಲುಸಂಕದ ಕಾರಣದಿಂದ ಜಾರಿಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ. ಮೃತಪಟ್ಟ ಎಲ್ಲರಿಗೂ ತಲಾ 5 ಲಕ್ಷ ರೂ.ಪರಿಹಾರವನ್ನು ವಿತರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News