ವಾರೀಸುದಾರರಿಗೆ 10 ಲಕ್ಷ ರೂ. ವಿಮಾ ಮೊತ್ತ ನೀಡಲು ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ

Update: 2023-08-08 16:48 GMT

ಉಡುಪಿ, ಆ.8: ಸೇವಾ ನ್ಯೂನ್ಯತೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮೃತರ ವಾರೀಸುದಾರರಿಗೆ 10ಲಕ್ಷ ರೂ. ಪರಿಹಾರ ಮೊತ್ತವನ್ನು ಪಾವತಿಸುವಂತೆ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ವಿಮಾ ಕಂಪೆನಿಗೆ ಆದೇಶ ನೀಡಿದೆ.

ಹೆಬ್ರಿಯ ನಿವಾಸಿ ಸಂತೋಷ್ ಶೆಟ್ಟಿ ಎಂಬವರು 2018ರ ಡಿ.24ರಂದು ಕೆಬಿಎಲ್ ಸುರಕ್ಷಾ ಗುಂಪು ವೈಯಕ್ತಿಕ ಅಪಘಾತ ವಿಮೆಯನ್ನು ಮಾಡಿಕೊಂಡಿದ್ದರು. 2019ರ ನ.1ರಂದು ಸಂತೋಷ್ ಶೆಟ್ಟಿ ಚಾರ ಬಳಿ ನದಿಯಲ್ಲಿ ಸ್ನಾನಕ್ಕೆಂದು ಇಳಿದ ವೇಳೆ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ವಾರೀಸುದಾರರು ಪಾಲಿಸಿಯ ಕ್ಲೈಮ್ ಮೊತ್ತವನ್ನು ನೀಡುವಂತೆ ಕಂಪೆನಿಯ ಬಳಿ ಅರ್ಜಿ ಸಲ್ಲಿಸಿದ್ದರು. ಕಂಪೆನಿಯು ಮಾಹಿತಿ ಹಾಗೂ ಕ್ಲೈಮ್‌ನ್ನು ವಿಳಂಬವಾಗಿ ನೀಡಿರುವ ಕಾರಣ ಮುಂದಿಟ್ಟು 2021ರ ಜೂ.25ರಂದು ಕ್ಲೈಮ್ ಮೊತ್ತ ನೀಡಲು ನಿರಾಕರಿಸಿತು.

ಈ ಹಿನ್ನೆಲೆಯಲ್ಲಿ ಮೃತರ ವಾರೀಸುದಾರರು ನ್ಯಾಯಕ್ಕಾಗಿ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯದಲ್ಲಿ ದೂರು ಅರ್ಜಿ ದಾಖಲಿಸಿದ್ದರು. ದೂರುದಾರರು ಹಾಗೂ ಎದುರುದಾರರ ವಾದ ಪ್ರತಿವಾದ ಗಳನ್ನು ಆಲಿಸಿ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ಕಂಪೆನಿಗೆ ಅಪಘಾತ ವಿಮಾ ಮೊತ್ತ 10ಲಕ್ಷ ರೂ., ಕ್ಲೈಮು ನೀಡಲು ನಿರಾಕರಿಸಿದ ದಿನಾಂಕದಿಂದ ಪಾವತಿಸುವಲ್ಲಿಯವರೆಗೆ ಶೇ.10 ಬಡ್ಡಿಯಂತೆ 25ಸಾವಿರ ರೂ.ವನ್ನು ಪರಿಹಾರ ಮೊತ್ತವಾಗಿಯೂ ಹಾಗೂ 10ಸಾವಿರ ರೂ.ವನ್ನು ದಾವಾ ಖರ್ಚಾಗಿಯೂ ಮೃತರ ವಾರಿಸುದಾರರಾದ ಪುಷ್ಪ ಶೆಟ್ಟಿ ಹಾಗೂ ದಿವ್ಯಶ್ರೀ ಶೆಟ್ಟಿಯವರಿಗೆ ತೀರ್ಪು ನೀಡಿದ 30 ದಿನದೊಳಗೆ ನೀಡುವಂತೆ ಅಧ್ಯಕ್ಷ ಸುನೀಲ್ ರೆಡ್ಡಿ, ಮಹಿಳಾ ಸದಸ್ಯರಾದ ಸುಜಾತ ಬಿ.ಕೋರಳ್ಳಿ, ಈ.ಪ್ರೇಮಾ ಅವರನ್ನು ಒಳಗೊಂಡ ನ್ಯಾಯ ಪೀಠ ಜು.31ರಂದು ಆದೇಶಿಸಿದೆ. ವಾರೀಸುದಾರರ ಪರವಾಗಿ ಕಾರ್ಕಳದ ವಕೀಲ ವಿವೇಕಾನಂದ ಮಲ್ಯ ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News