ಉಡುಪಿ: ಮಾನ ಹಾನಿಯಾಗುವಂತೆ ವರ್ತಿಸಿದ ಆರೋಪಿಗೆ ಜೈಲುಶಿಕ್ಷೆ, ದಂಡ

Update: 2023-08-09 16:14 GMT

ಉಡುಪಿ, ಆ.9: ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಮಹಿಳೆಯ ಮಾನಕ್ಕೆ ಧಕ್ಕೆ ಉಂಟು ಮಾಡಿದ ಪ್ರಕರಣದ ಆರೋಪಿಗೆ ಉಡುಪಿಯ ಒಂದನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಮಣಿಪಾಲದ ದೂರದರ್ಶನ ಕಚೇರಿಯ ನೌಕರ, ಪುತ್ತೂರು ಗ್ರಾಮದ ಬಾಲಕೃಷ್ಣ ಶಿಕ್ಷೆಗೆ ಗುರಿಯಾಗಿರುವ ಆರೋಪಿ.

ಬಾಲಕೃಷ್ಣ ತನ್ನ ಕಚೇರಿಯಲ್ಲಿರುವ ಪುರುಷ ಸಿಬ್ಬಂದಿ ಜೊತೆ ಮಹಿಳಾ ಸಹೋದ್ಯೋಗಿ ಸಲುಗೆಯಿಂದ ಒಟ್ಟಿಗೆ ಇರುವ ಅಶ್ಲೀಲ ಛಾಯಾಚಿತ್ರವನ್ನು ಮೊಬೈಲ್‌ನಲ್ಲಿ ತೆಗೆದಿದ್ದು, ಬಳಿಕ ಅದನ್ನು ಬೈಕಾಡಿಯ ಗೋಪಾಲ ಎಂಬಾತನಿಗೆ ನೀಡಿದ್ದನು. ಈ ಚಿತ್ರವನ್ನು ಮುಂದಿಟ್ಟು ಕೊಂಡು ಇವರಿಬ್ಬರೂ ಮಹಿಳೆಗೆ ಲೈಂಗಿಕ ಬೇಡಿಕೆ ಇಡುತ್ತಿದ್ದರು. ಮಹಿಳೆ ಇದಕ್ಕೆ ಒಪ್ಪದಿದ್ದಾಗ ಆರೋಪಿ ಗೋಪಾಲ ಅಶ್ಲೀಲ ಛಾಯಾ ಚಿತ್ರಗಳನ್ನು ತೋರಿಸಿ ಅವರ ಮಾನಕ್ಕೆ ಧಕ್ಕೆಯನ್ನು ಉಂಟು ಮಾಡಿರುವುದಾಗಿ ದೂರಲಾಗಿದೆ.

2014 ಜ.4ರಂದು ಈ ಇಬ್ಬರೂ ಆರೋಪಿಗಳು ಮಹಿಳೆಯನ್ನು ತಡೆದು ನಿಲ್ಲಿಸಿ, ಅವರ ಮೇಲೆ ಲೈಂಗಿಕವಾಗಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಲೈಂಗಿಕ ಸಂಪರ್ಕಕ್ಕೆ ಸಮ್ಮತಿ ನೀಡದಿದ್ದರೆ, ಅಶ್ಲೀಲ ಛಾಯಾಚಿತ್ರಗಳನ್ನು ಊರಿನವರಿಗೆ ತೋರಿಸಿ ಜೀವನ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಪ್ರಕರಣದ ಆರೋಪಿಗಳ ಪೈಕಿ ಗೋಪಾಲ ಮೃತಪಟ್ಟಿದ್ದು, ಎರಡನೇ ಆರೋಪಿ ಬಾಲಕೃಷ್ಣ ವಿರುದ್ಧ ಆಗಿನ ಮಲ್ಪೆ ಠಾಣೆಯ ಎಸ್ಸೈ ಗಿರಿಶ್ ಕುಮಾರ್ ಪ್ರಕರಣ ದಾಖಲಿಸಿ, ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಆರೋಪಿಗಳ ಮೇಲಿನ ಆರೋಪ  ಸಾಬೀತಾಗಿರುವು ದಾಗಿ ಅಭಿಪ್ರಾಯಪಟ್ಟು ಆರೋಪಿಗೆ 3 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ, ಆದೇಶ ನೀಡಿದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದು, ಮಮ್ತಾಝ್ ಸಾಕ್ಷಿ ವಿಚಾರಣೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News