ಉಡುಪಿ| ಎಂಟು ಮಂದಿ ಅಕ್ರಮ ಬಾಂಗ್ಲಾ ವಲಸಿಗರಿಗೆ ನ್ಯಾಯಾಂಗ ಬಂಧನ

Update: 2024-10-19 15:55 GMT

ಸಾಂದರ್ಭಿಕ ಚಿತ್ರ 

ಉಡುಪಿ: ಕಳೆದ ಐದು ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳು ಸೇರಿದಂತೆ ಒಟ್ಟು ಎಂಟು ಮಂದಿ ಬಾಂಗ್ಲಾ ಅಕ್ರಮ ವಲಸಿಗರನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.

ಅ.12ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿತರಾದ ಹಕೀಮ್ ಅಲಿ, ಸುಜೋನ್ ಎಸ್.ಕೆ. ಫಾರೂಕ್, ಇಸ್ಮಾಯಿಲ್ ಎಸ್.ಕೆ., ಕರೀಮ್ ಎಸ್.ಕೆ., ಸಲಾಂ ಎಸ್.ಕೆ., ರಾಜಿಕುಲ್ ಎಸ್.ಕೆ. ಎಂಬವರನ್ನು ಪೊಲೀಸರು ಬಂಧಿಸಲಾಗಿತ್ತು. ಇವರನ್ನು ಅ.14ರಂದು ಪೊಲೀಸರು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದರು.

ಇವರು ನೀಡಿದ ಮಾಹಿತಿ ಆಧಾರದಲ್ಲಿ ಕಾರ್ಕಳದಲ್ಲಿ ಅ.17ರಂದು ಮತ್ತೆ ಇಬ್ಬರು ಆರೋಪಿಗಳಾದ ಮುಹಮ್ಮದ್ ಇಮಾಮ್ ಶೇಕ್ ಹಾಗೂ ಮುಹಮ್ಮದ್ ರಿಮುಲ್ ಇಸ್ಲಾಮ್ ಎಂಬವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಅ.18ರಂದು ಸಂತೆಕಟ್ಟೆಯಲ್ಲಿ ಮತ್ತೋರ್ವ ಆರೋಪಿ ಮುಹಮ್ಮದ್ ಜಹಾಂಗೀರ್ ಆಲಂ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಏಳು ಮಂದಿಯ ಐದು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಹಾಗೂ ನಿನ್ನೆ ಬಂಧಿತ ಜಹಾಂಗೀರ್‌ನನ್ನು ಪೊಲೀಸರು ಉಡುಪಿಯ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶ ಮನು ಪಾಟೇಲ್ ಈ ಎಂಟು ಮಂದಿ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು.

ಜಾಮೀನಿಗೆ ಅರ್ಜಿ: ಬಂಧಿತ 10 ಮಂದಿ ಆರೋಪಿಗಳಿಗೆ ಜಾಮೀನು ನೀಡುವಂತೆ ಕೋರಿ ಆರೋಪಿಗಳ ಪರ ವಕೀಲ ಅಸಾದುಲ್ಲಾ ಕಟಪಾಡಿ ನ್ಯಾಯಾಲಯಕ್ಕೆ ಇಂದು ಅರ್ಜಿ ಸಲ್ಲಿಸಿದರು.

ನ್ಯಾಯಾಲಯವು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ಬಗ್ಗೆ ಮುಂದಿನ ವಿಚಾರಣೆಯನ್ನು ಅ.21ಕ್ಕೆ ಮುಂದೂಡಿ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News