ಉಡುಪಿ| ವಕೀಲನ ಮೇಲೆ ಹಲ್ಲೆ ಪ್ರಕರಣ: ಉಡುಪಿ ವಕೀಲರ ಸಂಘದಿಂದ ಪ್ರತಿಭಟನೆ
ಉಡುಪಿ, ಡಿ.5: ಚಿಕ್ಕಮಗಳೂರಿನ ಯುವ ನ್ಯಾಯವಾದಿ ಪ್ರೀತಮ್ ಮೇಲಿನ ಪೊಲೀಸರ ಹಲ್ಲೆ ಖಂಡಿಸಿ ಉಡುಪಿ ವಕೀಲರ ಸಂಘದ ವತಿಯಿಂದ ಮಂಗಳವಾರ ಉಡುಪಿ ನ್ಯಾಯಾಲಯದ ಎದುರು ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ವಕೀಲರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಖಂಡನೀಯ. ವಕೀಲರ ಮೇಲೆ ಈ ರೀತಿಯ ದೌರ್ಜನ್ಯ ಮತ್ತೆ ಮತ್ತೆ ಪುನಾರ್ವತನೆ ಆಗುತ್ತಿದೆ. ಇದನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸರಕಾರ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಶೀಘ್ರವೇ ಜಾರಿಗೆ ತರಬೇತು. ವಕೀಲರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವಕೀಲರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣವನ್ನು ವಾಪಾಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ನಡೆದ ಧರಣಿಯಲ್ಲಿ ಪೊಲೀಸರು ಭಾಗಿಯಾಗಿರುವುದು ಇಡೀ ಇಲಾಖೆಗೆ ದೊಡ್ಡ ಕಪ್ಪು ಚುಕ್ಕೆಯಾಗಿದೆ. ಕಾನೂನು ರಕ್ಷಿಸಬೇಕಾದ ಪೊಲೀಸರೇ ಈ ರೀತಿ ಧರಣಿ ನಡೆಸಿರುವುದು ದುರಂತ. ಆದುದರಿಂದ ಸರಕಾರ ಪ್ರತಿಭಟನೆ ನಡೆಸಿದ ಪೊಲೀಸರ ವಿರುದ್ಧ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಹಿರಿಯ ನ್ಯಾಯವಾದಿ, ಸಂಘದ ಮಾಜಿ ಅಧ್ಯಕ್ಷ ಎ.ಸಂಜೀವ, ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್., ಹಿರಿಯ ವಕೀಲ ಆನಂದ ಮಡಿವಾಳ, ನ್ಯಾಯವಾದಿಗಳಾದ ಅಮೃತಕಲಾ, ಸೌಮ್ಯ, ಅಸದುಲ್ಲಾ ಕಟಪಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ, ಖಜಾಂಚಿ ಗಂಗಾಧರ ಎಚ್.ಎಂ., ಜತೆ ಕಾರ್ಯದರ್ಶಿ ರವೀಂದ್ರ ಬೈಲೂರು, ಕ್ರೀಡಾ ಕಾರ್ಯದರ್ಶಿ ಸುಮಿತ್ ಹೆಗ್ಡೆ, ಪ್ರಮುಖರಾದ ಹರೀಶ್ ಶೆಟ್ಟಿ ಪಾಂಗಾಳ, ಹಬೀಬ್ ಅಲಿ, ಶ್ರೀನಿಧಿ ಹೆಗ್ಡೆ, ಶಿವಾನಂದ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.