ಉಡುಪಿ| ಅನೈತಿಕ ಪೊಲೀಸ್‌ಗಿರಿ ವಿರುದ್ಧ ಕಾನೂನು ಕ್ರಮ: ನೂತನ ಎಸ್ಪಿ ಡಾ.ಕೆ.ಅರುಣ್
ಉಡುಪಿ, ಸೆ.7: ಉಡುಪಿ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ.ಕೆ.ಅರುಣ್ ಇಂದು ಅಧಿಕಾರ ಸ್ವೀಕರಿಸಿದರು.
ಎಂಬಿಬಿಎಸ್ ಪದವೀಧರರಾದ ಇವರು ತಮಿಳುನಾಡು ಮೂಲದವರಾಗಿದ್ದು, 2014ರ ಐಎಪಿಎಸ್ ಬ್ಯಾಚಿನ ಅಧಿಕಾರಿಯಾಗಿದ್ದು, ಪಾಂಡಿಚೇರಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಚಿತ್ರದುರ್ಗ, ದಾವಣಗೆರೆ, ವಿಜಯಪುರ ಜಿಲ್ಲಾ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಇವರು, ಕಲ್ಬುರ್ಗಿ ಪೊಲೀಸ್ ತರಬೇತಿ ಸಂಸ್ಥೆಯ ಪ್ರಾಂಶು ಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು.
ನಿರ್ಗಮನ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ನೂತನ ಎಸ್ಪಿಯನ್ನು ಸ್ವಾಗತಿಸಿ ಅಧಿಕಾರ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ನೂತನ ಎಸ್ಪಿ ಡಾ.ಕೆ.ಅರುಣ್, ಯಾವುದೇ ರೀತಿಯ ಕೋಮು ಹಿಂಸಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಅನೈತಿಕ ಪೊಲೀಸ್ ಗಿರಿಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಇದರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು. ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ಮಣಿಪಾಲದಲ್ಲಿ ನಡೆಯುತ್ತಿರುವ ಪಬ್, ಡ್ರಗ್ಸ್ ಸೇರಿದಂತೆ ಎಲ್ಲ ರೀತಿಯ ಕಾನೂನು ವಿರೋಧಿ ಚಟುವಟಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವುದು ಕೂಡ ರಾಜ್ಯ ಸರಕಾರದ ಆದ್ಯತೆ ಆಗಿದೆ ಎಂದು ಅವರು ತಿಳಿಸಿದರು.