ಉಡುಪಿ: ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ; ಆರೋಪಿ‌ ಪ್ರವೀಣ್ ಚೌಗುಲೆ ಜಾಮೀನು ಅರ್ಜಿ ತಿರಸ್ಕೃತ

Update: 2023-12-30 09:14 GMT

ಉಡುಪಿ, ಡಿ.30: ನೇಜಾರಿನಲ್ಲಿ ನಡೆದ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಆದೇಶ ನೀಡಿದೆ.

ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಕೋರಿ ಡಿ.14ರಂದು ಅರ್ಜಿಯನ್ನು ವಕೀಲ ಕೆ.ಎಸ್.ಎನ್.ರಾಜೇಶ್ ಮೂಲಕ ಸಲ್ಲಿಸಿದ್ದನು. ಇದಕ್ಕೆ ಸರಕಾರಿ ಅಭಿಯೋಜಕ ಪ್ರಕಾಶ್‌ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿದ್ದರು.

ಈ ಕುರಿತು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ, ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯಲ್ಲಿ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳಿಂದ ಆರೋಪಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೆ ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಕೂಡ ಇದ್ದಾರೆ. ಇದೊಂದು ಮರಣದಂಡನೆ ಶಿಕ್ಷೆ ಕೊಡುವ ಗಂಭೀರ ಹಾಗೂ ತ್ರೀವ ಸ್ವರೂಪದ ಪ್ರಕರಣ ಮತ್ತು ಪ್ರಕರಣದ ತನಿಖೆ ಇನ್ನೂ ಬಾಕಿ ಇರುವುದರಿಂದ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News