ಉಡುಪಿ: ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ ‘ನಡಿಗೆ’; ಹಳೆಯ ಪಾದರಕ್ಷೆಗಳ ಸಂಗ್ರಹ ಅಭಿಯಾನಕ್ಕೆ ಚಾಲನೆ

Update: 2023-11-30 06:44 GMT

ಉಡುಪಿ, ನ.27: ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ನಡೆಯುವ ಬಡ ಮಕ್ಕಳಿಗೆ ಪಾದರಕ್ಷೆಯನ್ನು ಉಚಿತವಾಗಿ ತಯಾರಿಸಿ ಒದಗಿಸುವ ಮುಂಬೈಯ ಗ್ರೀನ್ ಸೋಲ್ ಸಂಸ್ಥೆಗೆ ಕಚ್ಚಾ ವಸ್ತುಗಳನ್ನು ನೀಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ ‘ನಡಿಗೆ’ ಎಂಬ ಹಳೆಯ ಪಾದರಕ್ಷೆಗಳ ಸಂಗ್ರಹ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಕರಾವಳಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನಡೆಯುವ ಈ ಅಭಿಯಾನವನ್ನು ಉಡುಪಿ ಎಂಜಿಎಂ ಕಾಲೇಜಿನ ಆವರಣದಲ್ಲಿನ ದಾನಿ ದಿ.ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ವೇದಿಕೆಯಲ್ಲಿ ಉದ್ಘಾಟಿಸಿದ ಪರಿಸರ ವಾದಿ ದಿನೇಶ್ ಹೊಳ್ಳ ಮಾತನಾಡಿ, ಪರಿಸರಕ್ಕೆ ಪೂರಕವಾದ ಈ ಅಭಿಯಾನ ದಿಂದ ಬರಿಗಾಲಿನಲ್ಲಿ ಕಾಡು ಮೇಡುಗಳಲ್ಲಿ ಕೀಲೋ ಮೀಟರ್‌ಗಟ್ಟಲೆ ಶಾಲೆಗಳಿಗೆ ನಡೆದುಕೊಂಡೇ ಹೋಗುವ ಆದಿವಾಸಿ ಬಡ ಮಕ್ಕಳಿಗೆ ಬಹಳಷ್ಟು ಅನುಕೂಲವಾಗಲಿದೆ. ಚಪ್ಪಲಿಯನ್ನು ಮರುಬಳಕೆಗೆ ದಾನವಾಗಿ ನೀಡುವುದ ರಿಂದ ಪರಿಸರಕ್ಕೂ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು.


ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಛಾನದ ಸ್ಥಾಪಕಾಧ್ಯಕ್ಷ ವಿಶ್ವನಾಥ ಶೆಣೈ, ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕ ಅಶ್ವಥ್ ಎಸ್.ಎಲ್., ಗಿರೀಜಾ ಗ್ರೂಪ್‌ನ ಪ್ರವರ್ತಕ ರವೀಂದ್ರ ಶೆಟ್ಟಿ, ಹೋಪ್ ಇಂಡಿಯಾ ಫೌಂಡೇಶನ್‌ನ ಸ್ಥಾಪಕ ಅನ್ಸಾರ್ ಅಹ್ಮದ್, ಮಣಿಪಾಲ ಮಹಿಳಾ ಸಮಾಜ ಅಧ್ಯಕ್ಷಷೆ ಡಾ.ಸುಲತಾ ಭಂಡಾರಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ವಿಷನ್ ಅಕಾಡೆಮಿ ಆಫ್ ಮ್ಯೂಸಿಕ್ ಇದರ ಸಂಸ್ಥಾಪಕ ಅಡಾಲ್ಫ್ ಶೆರ್ವಿನ್ ಅಮ್ಮನ್ನ ಶುಭ ಹಾರೈಸಿದರು.


ಕಾರ್ಯಕ್ರಮದ ರೂವಾರಿ ಅವಿನಾಶ್ ಕಾಮತ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಅಭಿಗೈಲ್ ಎಸ್.ಅಂಚನ್ ವಂದಿಸಿದರು. ಉಪನ್ಯಾಸ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಡಿ.2ರವರೆಗೆ ನಡೆಯುವ ಈ ಅಭಿಯಾನಕ್ಕೆ ಸಾರ್ವಜನಿಕರು ತಾವು ಬಳಸಿದ ಪಾರ್ಮಲ್ ಶೂಗಳು, ಸ್ಪೋರ್ಟ್ಸ್ ಶೂಗಳು, ಸ್ಯಾಂಡಲ್ಸ್, ಸ್ಲಿಪ್ಪರ್ಸ್‌, ರಬ್ಬರ್ ಶೂಗಳು ಹೀಗೆ ಎಲ್ಲ ರೀತಿಯ ಸುಸ್ಥಿತಿಯಲ್ಲಿರುವ ಪಾದರಕ್ಷೆಗಳನ್ನು ದಾನ ರೂಪದಲ್ಲಿ ನೀಡಬಹುದಾಗಿದೆ. ಸೋಲ್ ಸವೆದ ಚಪ್ಪಲಿ, ಶೂಗಳು, ಹೀಲ್ಸ್, ಪಾಯಿಟೆಂಡ್ ಹೀಲ್ಸ್ ಮತ್ತು 10ವರ್ಷದೊಳಗಿನ ಮಕ್ಕಳ ಪಾದರಕ್ಷೆಗಳನ್ನು ಈ ಅಭಿಯಾನದಲ್ಲಿ ಸ್ವೀಕರಿಸುವುದಿಲ್ಲ ಎಂದು ಅವಿನಾಶ್ ಕಾಮತ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News