ಉಡುಪಿ: ಕ್ರೌರ್ಯಕ್ಕೆ ಬಲಿಯಾದ ಜೀವಗಳಿಗೆ ಕಂಬನಿ ಮಿಡಿದ ಸರ್ವಧರ್ಮೀಯರು

Update: 2023-11-22 16:32 GMT

ಉಡುಪಿ, ನ.22: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಸಂತೆಕಟ್ಟೆ ಕಲ್ಯಾಣಪುರದ ಮೌಂಟ್ ರೋಸರಿ ಮಿಲ್ಲೆನಿಯಮ್ ಹಾಲ್‌ನಲ್ಲಿ ಬುಧವಾರ ನಡೆದ ಸಂತಾಪ ಸಭೆಯಲ್ಲಿ ಮನುಷ್ಯತ್ವದ ಕೊಲೆಯನ್ನು ಖಂಡಿಸಿ ನೇಜಾರಿನಲ್ಲಿ ಕ್ರೌರ್ಯಕ್ಕೆ ಬಲಿಯಾದ ಜೀವಗಳಿಗಾಗಿ ನೆರೆದ ಸಹಸ್ರಾರು ಸಂಖ್ಯೆಯ ಸರ್ವಧರ್ಮಿಯರು ಕಂಬನಿ ಮಿಡಿದರು.

ಇದೇ ಸಭೆಯಲ್ಲಿ ಸಾವಿರಾರು ಮಂದಿಗೆ ಸಾಕ್ಷಿಯಾಗಿ ವಿವಿಧ ಠರಾವು ಮಂಡಿಸಿ, ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಪ್ರಕರಣದ ಆರೋಪಿಯನ್ನು ಸಮಗ್ರವಾಗಿ ವಿಚಾರಣೆ ನಡೆಸಿ ಈ ಕೃತ್ಯದಲ್ಲಿ ಭಾಗಿಯಾದ ಅಥವಾ ಸಹಕರಿಸಿರಬಹುದಾದ ಇತರರನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ರಾಜ್ಯ ಸರಕಾರವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ನ್ನು ನೇಮಿಸಬೇಕು. ತ್ವರಿತ ಗತಿಯಲ್ಲಿ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಶಿಕ್ಷೆ ಖಾತ್ರಿ ಪಡಿಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಬೇಕು. ಊಹೆಗಳು ಮತ್ತು ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸುವ ಮೂಲಕ ಮಾಧ್ಯಮಗಳು ಸಂತ್ರಸ್ಥ ಕುಟುಂಬದ ತೇಜೋವಧೆ ಮಾಡುವುದು ಹಾಗೂ ಮಾನಸಿಕ ಕಿರುಕುಳ ನೀಡುವುದನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.

ಮುಂದಿನ ದಿನಗಳಲ್ಲಿ ಈ ರೀತಿಯ ಭೀಭತ್ಸ ಕೃತ್ಯಗಳು ನಡೆಯದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಆಯಾಕಟ್ಟಿನ ಜಾಗದಲ್ಲಿ ಸಿಸಿಟಿವಿ ಅಳವಡಿಸಬೇಕು. ಇಂತಹ ಕ್ರೂರ ಅಪರಾಧ ಗಳಿಗೆ ಪ್ರೇರಣೆ ನೀಡುವ ದ್ವೇಷ ಭಾಷಣಗಳಿಗೆ ತಕ್ಷಣ ಕಡಿವಾಣ ಹಾಕಬೇಕು. ಮನೆಗಳಲ್ಲಿ ಆಯುಧಗಳನ್ನು ಇರಿಸಿಕೊಳ್ಳಲು ಕರೆ ನೀಡುವ ಹಿಂಸಾ ಪ್ರಚೋದಕರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು ಎಂಬ ಠರಾವನ್ನು ಸಭೆಯಲ್ಲಿ ಮಂಡಿಸಲಾಯಿತು.

ಮನುಷ್ಯತ್ವವೇ ಉನ್ನತವಾದುದು

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಮುಖ್ಯ ಭಾಷಣ ಮಾಡಿ, ಉಡುಪಿ ಜಿಲ್ಲೆಯ ಬಗ್ಗೆ ನನಗೆ ಬಹಳ ಹೆಮ್ಮೆ ಎನಿಸುತ್ತಿದೆ. ಆದರೆ ಈ ಘಟನೆಯಿಂದ ಜೀವ ಕಳೆದುಕೊಂಡವರನ್ನು ಇಲ್ಲಿನ ಹಿಂದೂ, ಕ್ರಿಶ್ಚಿಯನ್ನರು ಯಾವುದೇ ಜಾತಿ ಧರ್ಮದ ಕನ್ನಡಕದಲ್ಲಿ ನೋಡಿಲ್ಲ. ಅವರು ಕೂಡ ನಮ್ಮಂತಹ ಮನುಷ್ಯರು ಎಂಬ ನೆಲೆಯಲ್ಲಿ ನೋಡಿದರು. ಮನುಷ್ಯತ್ವಕ್ಕಿಂತ ಉನ್ನತವಾದುದು ಈ ಜಗತ್ತಿನೇ ಬೇರೆ ಇಲ್ಲ. ಇಂದು ಉಡುಪಿಯಲ್ಲಿ ನಮಗೆ ನೋಡಲು ಸಿಕ್ಕಿದೆ ಎಂದು ಹೇಳಿದರು.

ಆ ದಿನ ಆ ಪರಿಸರದ ಹಿಂದೂಗಳು ದೀಪಾವಳಿ ಆಚರಿಸದೆ ಪಟಾಕಿಯನ್ನು ಸಿಡಿಸದೇ ದುಃಖಿತರಾಗಿದ್ದರು. ರಿಕ್ಷಾ ಚಾಲಕ ಶ್ಯಾಮ್ ಯಾವುದೇ ಅಂಜಿಕೆ ಇಲ್ಲದೆ ಆರೋಪಿಯ ಬಗ್ಗೆ ಸುಳಿವು ಕೊಟ್ಟು ಪೊಲೀಸರಿಗೆ ನೆರವಾದರು. ಮಹಾಬಲ ತೋಳಾರ್ ಅಂತ್ಯಕ್ರಿಯೆಗೆ ಬಂದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಇಂದಿನ ಈ ಸಂತಾಪ ಸಭೆಗೆ ರೋಸರಿ ಚರ್ಚ್‌ನವರು ಉಚಿತವಾಗಿ ಹಾಲ್ ವ್ಯವಸ್ಥೆ ಮಾಡಿಕೊಟ್ಟರು. ಇದುವೇ ನಿಜವಾದ ಧರ್ಮ. ಇನ್ನೊಬ್ಬರ ನೋವಿನಲ್ಲಿ ನೋವು ಅನುಭವಿಸುವುದು ಧರ್ಮವೇ ಹೊರತು ಇನ್ನೊಬ್ಬರಿಗೆ ನೋವು ಕೊಡುವುದು ಅಲ್ಲ ಎಂದರು.

ಕಲ್ಯಾಣಪುರ ಮೌಂಟ್ ರೋಸರಿ ಚರ್ಚ್‌ನ ಧರ್ಮಗುರು ಫಾ.ರೋಕಿ ಡಿಸೋಜ ಮಾತನಾಡಿ, ಇದು ಕೇವಲ ಒಂದು ಕುಟುಂಬದ ದುಃಖ ಅಲ್ಲ. ಇಡೀ ಸಮಾಜದ ನೋವಾಗಿದೆ. ಆಗಬಾರದ ಘಟನೆ ನಮ್ಮಲ್ಲಿ ನಡೆದಿದೆ. ಆದರೂ ಮುಸ್ಲಿಮರು ಯಾವುದೇ ರೀತಿಯಲ್ಲೂ ಸಂಯಮ ಕಳೆದುಕೊಳ್ಳದೆ ಶಾಂತ ರೀತಿಯಲ್ಲಿ ವರ್ತಿಸುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾದರು ಎಂದು ಹೇಳಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸಂತ್ರಸ್ತ ಕುಟುಂಬದ ನೂರ್ ಮುಹಮ್ಮದ್, ಉದ್ಯಾವರ ನಾಗೇಶ್ ಕುಮಾರ್, ಎಂ.ಎ.ಗಫೂರ್, ಅಶ್ರಫ್ ಕೋಡಿಬೆಂಗ್ರೆ, ಮಹಾಬಲ ತೋಳಾರ್, ಪ್ರತ್ಯಕ್ಷದರ್ಶಿ ಅಟೋ ಚಾಲಕ ಶ್ಯಾಮ್, ನಿವೃತ್ತ ಪ್ರೊ. ಹಿಲ್ಡಾ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಬಾಲಕೃಷ್ಣ ಶೆಟ್ಟಿ, ಸುಂದರ್ ಮಾಸ್ತರ್, ಅಬೂಬಕ್ಕರ್ ನೇಜಾರ್, ಜನಾರ್ದನ ತೋನ್ಸೆ, ದಿನಕರ ಹೆರೂರು, ರಮೇಶ್ ಕಾಂಚನ್ ಸಂತಾಪ ನುಡಿಗಳನ್ನಾಡಿದರು. ಡಾ.ಸುನೀತಾ ಶೆಟ್ಟಿ ಸ್ವರಚಿತ ಕವನವನ್ನು ವಾಚನ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು.

ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷ ಎಸ್.ಎಂ.ಇರ್ಷಾದ್ ನೇಜಾರ್ ಅಧ್ಯಕ್ಷತೆ ವಹಿಸಿದ್ದರು. ಮೌಲಾನ ಆದಿಲ್ ನದ್ವಿ ಕುರ್‌ಆನ್ ಪಠಿಸಿದರು. ಶೇಖ್ ಸಲಾಹುದ್ದೀನ್ ಸ್ವಾಗತಿಸಿದರು. ಟಿ.ಎಂ.ಜಫ್ರುಲ್ಲಾ ಹೂಡೆ ವಂದಿಸಿದರು. ಯಾಸೀನ್ ಕೋಡಿ ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು.

‘ನನಗೆ ಮಾತೇ ಬರುತ್ತಿಲ್ಲ. ಮಾತನಾಡಿದರೆ ಕಣ್ಣಲ್ಲಿ ನೀರು ಬರುತ್ತೆ. ನೀವೆಲ್ಲ ನನಗೆ ಧೈರ್ಯ ತೋರಿಸಿದ್ದೀರಿ. ನಾನು ಮೊದಲು ಎನಿಸಿದ್ದೆ ನಾನು ಮತ್ತು ನನ್ನ ಕುಟುಂಬ ಇರುವುದು ಅಂತ. ಈಗ ನೋಡುವಾಗ ಇಡೀ ಸಮಾಜವೇ ನನ್ನ ಕುಟುಂಬ ಆಗಿದೆ. ಇದುವೇ ನನಗೆ ದೊರೆತ ದೊಡ್ಡ ಶಕ್ತಿ. ನನ್ನ ಪರಿಸ್ಥಿತಿ ಇನ್ನು ಮುಂದೆ ಯಾರಿಗೂ ಬರಬಾರದು ಮತ್ತು ಯಾವುದೇ ಮನೆಯಲ್ಲೂ ಈ ರೀತಿ ಆಗಬಾರದು’

-ನೂರ್ ಮುಹಮ್ಮದ್, ಸಂತ್ರಸ್ತ ಕುಟುಂಬದ ಯಜಮಾನ

‘ಇಂತಹ ಭೀಕರ ಘಟನೆ ನಡೆದ ಸಂದರ್ಭದಲ್ಲಿ ಜಿಲ್ಲೆಯ ಮುಸ್ಲಿಮ್ ಸಮುದಾಯ ತೋರಿದ ಸಂಯಮ ಹಾಗೂ ಪ್ರಭುಧ್ವತೆಯು ಇಡೀ ಜಗತ್ತಿಗೆ ಮಾದರಿಯಾಗಿದೆ. ಎಲ್ಲೂ ಈ ವಿಚಾರವನ್ನು ಇಟ್ಟುಕೊಂಡು ಸಮಾಜದಲ್ಲಿ ಕೋಮು ಧ್ವೇಷ ಹರುಡುವ ಕಾರ್ಯ ಮಾಡಿಲ್ಲ. ಈ ವಿಚಾರದಲ್ಲಿ ಕೆಲವು ಮಾಧ್ಯಮಗಳು ಮಾತ್ರ ಪೂರ್ವಗ್ರಹ ಪೀಡಿತರಾಗಿ ವರ್ತಿಸಿದವು. ಇದು ತೀರಾ ಖಂಡನೀಯ’

-ಯಾಸೀನ್ ಮಲ್ಪೆ, ಅಧ್ಯಕ್ಷರು, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ












Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News