ಉಡುಪಿ: ಜನಸಾಗರದ ಮಧ್ಯೆ ಸಂಪನ್ನಗೊಂಡ ‘ಶ್ರೀಕೃಷ್ಣ ಲೀಲೋತ್ಸವ’
ಉಡುಪಿ: ಚಿನ್ನದ ರಥದಲ್ಲಿ ಬಾಲಕೃಷ್ಣನ ಮೂರ್ತಿಯ ಮೆರವಣಿಗೆ, ರಥಬೀದಿಯ ಅಲ್ಲಲ್ಲಿ ನಿಲ್ಲಿಸಿದ ಮೊಸರು ಕುಡಿಕೆಗಳನ್ನು ಒಡೆಯುತ್ತಾ ಸಾಗುವ ಸಾಂಪ್ರದಾಯಿಕ ವೇಷದ ಗೊಲ್ಲರು ಹೀಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣನ ಜನ್ಮ ಹಾಗೂ ಬಾಲಲೀಲೆಗಳನ್ನು ನೆನಪಿಸುವ ಶ್ರೀಕೃಷ್ಣಲೀಲೋತ್ಸವ, ವಿಟ್ಲಪಿಂಡಿ, ಮೊಸರುಕುಡಿಕೆ ವೈಭವದಿಂದ ಸಂಪನ್ನಗೊಂಡಿತು.
ಅಪರಾಹ್ಣ 3 ಗಂಟೆಗೆ ಪ್ರಾರಂಭಗೊಂಡ ವಿಟ್ಲಪಿಂಡಿ ಉತ್ಸವ, ಶ್ರೀಕೃಷ್ಣ ಲೀಲೋತ್ಸವದ ವೈಭವದ ಶೋಭಾಯಾತ್ರೆಯಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು, ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರ ತೀರ್ಥರು ಹಾಗೂ ಉಡುಪಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಭಂಡಾರಕೇರಿ ಮಠದ ಶ್ರೀಪಾದರು ಪಾಲ್ಗೊಂಡರು.
ಈ ಉತ್ಸವಕ್ಕೆಂದು ವಿಶೇಷವಾಗಿ ತಯಾರಿಸಲಾದ ಮೃಣ್ಮಯ(ಮಣ್ಣಿನಲ್ಲಿ ತಯಾರಿಸಿದ ನೀಲಿ ಬಣ್ಣದ ಶ್ರೀಕೃಷ್ಣನ ಮೂರ್ತಿ) ಮೂರ್ತಿಯನ್ನು ಚಿನ್ನದ ರಥದಲ್ಲಿರಿಸಿ ರಥಬೀದಿಯ ಸುತ್ತ ಮೆರವಣಿಗೆ ನಡೆಸಲಾಯಿತು. ಇನ್ನೊಂದು ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಉತ್ಸವ ಮೂರ್ತಿನ್ನಿರಿಸಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಸಲುವಾಗಿ ಮಣ್ಣಿನ ಮಡಕೆಯಲ್ಲಿ ಮೊಸರು, ಹಾಲು, ಓಕುಳಿ ಗಳನ್ನು ತುಂಬಿ ರಥಬೀದಿಯ ಸುತ್ತಲೂ ವಿಶೇಷವಾಗಿ ನಿರ್ಮಿಸಿದ 13 ಗುರ್ಜಿಗಳಿಗೆ ಅವುಗಳನ್ನು ಕಟ್ಟಿ ಯಾದವ ವೇಷಧಾರಿ ಗಳಾದ ಉಡುಪಿಯ ಗೊಲ್ಲರು ಉದ್ದನೆಯ ಕೋಲುಗಳಿಂದ ಮಡಕೆಗಳನ್ನು ಒಡೆಯುವ ಆಟವನ್ನು ಆಡಿದರು.
ರಥಬೀದಿಯ ಮಧ್ಯಭಾಗದಲ್ಲಿ ಹಾಕಲಾದ ವೇದಿಕೆಯಲ್ಲಿ ಹುಲಿವೇಷ ಪ್ರದರ್ಶನವನ್ನು ಪರ್ಯಾಯ ಸ್ವಾಮೀಜಿಗಳು ವೀಕ್ಷಿಸಿದರು. ಬಳಿಕ ಸ್ವಾಮೀಜಿಗಳು ನೆರೆದ ಭಕ್ತರತ್ತ ಉಂಡೆ, ಚಕ್ಕುಲಿ ಹಾಗೂ ಹಣ್ಣು ಹಂಪಲುಗಳನ್ನು ಎಸೆದರು. ಸ್ವಾಮೀಜಿ ಎಸೆದ ಪ್ರಸಾದವನ್ನು ಸ್ವೀಕರಿಸಲು ಭಕ್ತರು ಮುಗಿಬಿದ್ದರು.
ಮೆರವಣಿಗೆಯ ಕೊನೆಯಲ್ಲಿ ಚಿನ್ನದ ರಥದಲ್ಲಿರಿಸಿದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸು ವುದರೊಂದಿಗೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ವಿಧಿಗಳು ಸಂಪನ್ನಗೊಂಡವು. ನಾಡಿನ ಮೂಲೆ ಮೂಲೆಗಳಿಂದ ಆಗಮಿ ಸಿದ ಸಾವಿರಾರು ಭಕ್ತರು ಶೃದ್ಧೆ, ಭಕ್ತಿಗಳಿಂದ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.
ಮೆರವಣಿಗೆಯಲ್ಲಿ ಹುಲಿವೇಷ, ಚಂಡೆ, ತಟ್ಟಿರಾಯ, ವಾದ್ಯ, ಕೃಷ್ಣ ವೇಷ, ರಕ್ಕಸ ವೇಷ ಸೇರಿದಂತೆ ವಿವಿಧ ವೇಷಗಳು ಕಂಡುಬಂದವು. ಶೀರೂರು ಮಠದ ಬಳಿ ದಿ.ಶ್ರೀಲಕ್ಷ್ಮೀವರತೀರ್ಥರು ಪ್ರಾರಂಭಿಸಿದ ಹುಲಿವೇಷ ಹಾಗೂ ಜಾನಪದ ವೇಷ ಗಳ ಪ್ರದರ್ಶನವನ್ನು ಈ ಬಾರಿ ಶೀರೂರು ಮಠದ ವತಿಯಿಂದ ರಾಘವೇಂದ್ರ ಮಠದ ಎದುರು ನಿರ್ಮಿಸಲಾದ ವೇದಿಕೆಯಲ್ಲಿ ನಡೆಸಲಾಯಿತು.
ನಗರದ ಹಲವು ಕಡೆಗಳಲ್ಲಿ ಇಂದು ಹುಲಿವೇಷ ಹಾಗೂ ಇತರ ವೇಷಗಳ ಪ್ರದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾ ಗಿತ್ತು. ಆದರೆ ವಿಟ್ಲಪಿಂಡಿ ಮುಗಿದ ಬಳಿಕ ಸುರಿದ ಭಾರೀ ಮಳೆಯಿಂದ ಇವುಗಳನ್ನು ನೋಡಲು ನೆರೆದ ಜನತೆ ಕಿರಿಕಿರಿ ಅನುಭವಿಸುವಂತಾಯಿತು. ರಾಜಾಂಗಣದಲ್ಲಿ ಸಂಜೆ ಹುಲಿವೇಷ, ಜಾನಪದ ಕುಣಿತ ಸ್ಪರ್ಧೆಗಳು ನಡೆದವು.
ಮಠದ ಅನ್ನಬ್ರಹ್ಮ ಹಾಗೂ ಭೋಜನಶಾಲೆಯಲ್ಲಿ ಬೆಳಗಿನಿಂದಲೇ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಪ್ರಸಾದ ಸ್ವೀಕರಿಸಿದರು.
ಶ್ರೀಕೃಷ್ಣ ಜಯಂತಿಯ ಪ್ರಯುಕ್ತ, ಕಳೆದ ನಡುರಾತ್ರಿ 12:07ಕ್ಕೆ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಕೃಷ್ಣದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಕಿರಿಯ ಯತಿಗಳು ಹಾಗೂ ಭಂಡಾರಕೇರಿ ಶ್ರೀ ತುಳಸಿ ಸನ್ನಿಧಿಯಲ್ಲಿ ಅರ್ಘ್ಯಪ್ರಧಾನ ಮಾಡಿದ್ದರು.
ಬಿಗಿ ಬಂದೋಬಸ್ತ್: ವಿಟ್ಲಪಿಂಡಿಯಲ್ಲಿ ನಾಡಿನಾದ್ಯಂತದಿಂದ ಬಂದ ಸಹಸ್ರಾರು ಸಂಖ್ಯೆಯ ಭಕ್ತರು ಭಾಗಿಯಾದ ಹಿನ್ನೆಲೆ ಯಲ್ಲಿ ರಥಬೀದಿ, ರಾಜಾಂಗಣ ಪಾರ್ಕಿಂಗ್ ಪ್ರದೇಶ, ಮಠದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವಾಹನಗಳ ಭರಾಟೆ ಹಾಗೂ ಜನಜಂಗುಳಿಯಿಂದಾಗಿ ಇಂದು ಬೆಳಗಿನಿಂದಲೇ ನಗರದ ಪ್ರಮುಖ ರಸ್ತೆಗಳಲ್ಲಿ, ಶ್ರೀಕೃಷ್ಣ ಮಠದ ಆಸುಪಾಸಿನ ರಸ್ತೆಗಳಲ್ಲಿ ಸುಧೀರ್ಘ ಟ್ರಾಫಿಕ್ ಜಾಮ್ ಕಂಡುಬಂದಿದ್ದು, ಪಾದಾಚಾರಿಗಳು ಪರದಾಡುವಂತಾ ಯಿತು. ರಥಬೀದಿಯಲ್ಲೂ ಹೂಮಾರಾಟಗಾರರ ಭರಾಟೆ, ಹುಲಿವೇಷಧಾರಿಗಳ ಓಡಾಟ, ನಲಿಕೆಯಿಂದಾಗಿ ನಡೆದಾಡು ವುದೇ ಕಷ್ಟಕರ ವಾಗಿತ್ತು.