ಉಡುಪಿ: ನಿವೃತ್ತ ನೌಕರನ ಗೋಳಿಗೆ ಕಿವುಡಾದ ಅಧಿಕಾರಿಗಳು!

Update: 2024-11-04 16:11 GMT

ಉಡುಪಿ, ನ.4: ಸುಮಾರು 38 ವರ್ಷಗಳ ಕಾಲ ಮೀನುಗಾರಿಕಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿರುವ ನನ್ನ ಸೇವಾ ಅವಧಿಯಲ್ಲಿ ಒಂದು ವೇತನ ಬಡ್ತಿಯನ್ನು ದಿಢೀರ್ ಆಗಿ ಕಡಿತಗೊಳಿಸಲಾಗಿದೆ ಎಂದು ನಿವೃತ್ತ ಉದ್ಯೋಗಿ ಎನ್.ರಾಮ ಭಟ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಬಳಕೆದಾರರ ವೇದಿಕೆಯಲ್ಲಿ ಟ್ರಸ್ಟಿಯಾಗಿರುವ ರಾಮ ಭಟ್, ಯಾವುದೇ ಬಡ್ತಿ ಇಲ್ಲದೇ 35 ವರ್ಷಗಳ ಸೇವೆಯ ಬಳಿಕ 2019ರಲ್ಲಿ ತನಗೆ ಹಿರಿಯ ವೇತನಶ್ರೇಣಿಗೆ ಬಡ್ತಿ ದೊರಕಿತ್ತು. ಆದರೆ 2023ರಲ್ಲಿ ಸೇವಾ ನಿವೃತ್ತಿಯ ಸಂದರ್ಭದಲ್ಲಿ ಕರ್ನಾಟಕದ ಮಹಾಲೇಖಪಾಲರು ನಿಯಮವನ್ನು ಉಲ್ಲೇಖಿಸಿ ಒಂದು ವೇತನ ಬಡ್ತಿಯನ್ನು ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಕಡಿತಗೊಳಿಸಿದ್ದಾರೆ ಎಂದು ದೂರಿದರು.

ಆದರೆ ತನ್ನ ಸಹೋದ್ಯೋಗಿಯೊಬ್ಬರಿಗೆ ಅದೇ ನಿಯಮದಡಿ, ಅದೇ ರೀತಿ ಸನ್ನಿವೇಶದಲ್ಲಿ ಯಾವುದೇ ಆಕ್ಷೇಪವಿಲ್ಲದೇ ಪಿಂಚಣಿ ಅನುಮೋದನೆ ನೀಡಿರುವುದನ್ನು ಉಲ್ಲೇಖಿಸಿದ ರಾಮ್ ಭಟ್, ಈ ವಿಷಯದಲ್ಲಿ ತನಗೆ ಮಾತ್ರ ಅನ್ಯಾಯವಾಗಿದೆ ಎಂದರು.

ನ್ಯಾಯಕ್ಕಾಗಿ ತಾನು ಕಳೆದ 18 ತಿಂಗಳಿನಿಂದ 50ಕ್ಕೂ ಅಧಿಕ ಪತ್ರವ್ಯವಹಾರ ಗಳನ್ನು ಮಾಡಿದ್ದರೂ ಯಾವುದೇ ಉತ್ತರ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ತನಗಾದ ಅನ್ಯಾಯದ ಕುರಿತು ಸಿಎಜಿ, ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳಿಗೂ ದೂರಿ ಪತ್ರ ಬರೆದಿದ್ದೇನೆ. ರಾಷ್ಟ್ರಪತಿಗಳ ಕಾರ್ಯಾಲಯದಿಂದ ಎರಡು ಬಾರಿ ನೋಟೀಸು ನೀಡಿದ್ದರೂ ಮಹಾಲೇಖಪಾಲರು ಅದಕ್ಕೆ ಕ್ಯಾರೇ ಎಂದಿಲ್ಲ ಎಂದರು.

ತನಗೆ ಪದೋನ್ನತಿ ನೀಡಿದ ಮೀನುಗಾರಿಕಾ ಇಲಾಖೆ ನಿರ್ದೇಶಕರೊಂದಿಗೆ ಮಾತನಾಡಿ ಸರಿಪಡಿಸುವಂತೆ ವಿನಂತಿಸಿ ದ್ದರೂ, ಅವರಿಂದ ಸಕಾರಾತ್ಮಕ ಉತ್ತರ ಲಭಿಸಿಲ್ಲ. ಇಲಾಖೆಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಈ ಕುರಿತು ಪತ್ರ ಬರೆದು ದೂರಿಕೊಂಡರೂ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್ ಅವರು ಬೆಂಗಳೂರಿಗೆ ಕರೆಸಿಕೊಂಡಿದ್ದರೂ, ಕೊನೆಗೆ ನ್ಯಾಯಾಲಯಕ್ಕೆ ಹೋಗಬಹುದು ಎಂದು ಹೇಳಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಕೊನೆಯ ಅಸ್ತ್ರವಾಗಿ ತಾನು ಇದೀಗ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾಗಿ ರಾಮ ಭಟ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್, ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ, ಹಿರಿಯ ವಕೀಲ ಎಚ್.ಕೆ.ಮಲ್ಯ, ನಿವೃತ್ತ ಪ್ರಾಂಶುಪಾಲ ಪ್ರೊ.ಸದಾಶಿವ ರಾವ್, ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಣಣ್ಯ ಶೇರಿಗಾರ್ ಉಪಸ್ಥಿತ ರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News