ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣ: ಸಿಐಡಿ ಎಡಿಜಿಪಿ ಮನೀಶ್ ಭೇಟಿ; ತನಿಖೆ ಪ್ರಗತಿ ಪರಿಶೀಲನೆ
ಉಡುಪಿ, ಆ.10: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಿಂದ ಆಗಮಿಸಿದ ಸಿಐಡಿ ತಂಡದ ತನಿಖೆ ಮುಂದುವರಿದಿದ್ದು, ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮನೀಶ್ ಕರ್ಬೀಕರ್ ಉಡುಪಿಗೆ ಆಗಮಿಸಿ ಈವರೆಗಿನ ತನಿಖೆಯ ಪ್ರಗತಿಯನ್ನು ಪರಿಶೀಲಿಸಿದರು.
ಪ್ರಕರಣದ ಕುರಿತಂತೆ ಉಡುಪಿ ಪ್ರವಾಸಿ ಮಂದಿರದಲ್ಲಿ ಉಡುಪಿಯ ಎಸ್ಪಿ ಅಕ್ಷಯ್ ಎಂ.ಹಾಕೆ ಸಹಿತ ಹಿರಿಯ ಅಧಿಕಾರಿಗಳಿಂದ ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡ ಮನೀಶ್, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಉಡುಪಿ ಯಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.
ಉಡುಪಿ ಪೊಲೀಸರು ನಡೆಸಿದ ತನಿಖೆ ರಿಪೋರ್ಟ್ ಪಡೆದುಕೊಳ್ಳಲಾಗಿದೆ. ಪೊಲೀಸರು ಮತ್ತು ಸಿಐಡಿ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಮುಂದೆ ಏನೇನು ತನಿಖಾ ಪ್ರಕ್ರಿಯೆ ನಡೆಸಬೇಕು ಎಂದು ಈ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು.
ಪ್ರಕರಣದ ತನಿಖಾಧಿಕಾರಿಯಾಗಿ ಸಿಐಡಿ ಡಿವೈಎಸ್ಪಿ ಅಂಜುಮಾಲ ನಾಯಕ್ ಅವರನ್ನು ನೇಮಕ ಮಾಡಲಾಗಿದೆ. ತನಿಖೆಯ ಮೇಲ್ವಿಚಾರಣೆ ಪ್ರಯನ್ನು ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನಡೆಸುತ್ತಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಶೀಘ್ರ ತನಿಖಾಧಿಕಾರಿ ಕೈ ಸೇರಲಿದೆ ಎಂದರು.
ಪ್ರಕರಣದ ತನಿಖೆ ಮುಗಿದ ಬಳಿಕ ಕೋರ್ಟಿಗೆ ವರದಿ ಸಲ್ಲಿಸುತ್ತೇವೆ ಎಂದ ಅವರು ತನಿಖೆಯ ದೃಷ್ಟಿಯಿಂದ ಮೂರು ಮೊಬೈಲ್‌ನ ಎಫ್‌ಎಸ್‌ಎಲ್ ವರದಿಗೆ ಎಷ್ಟು ಮಹತ್ವವಿದೆ ಎಂದು ಪ್ರಶ್ನಿಸಿದಾಗ, ಅವು ತನಿಖೆಯ ಒಂದು ಭಾಗವಾಗಿರುತ್ತದೆ ಎಂದರು.
ಪ್ಲಾಸ್ಟಿಕ್ ಗೊಂಬೆ ಬಳಕೆ: ಪ್ರವಾಸಿ ಮಂದಿರದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಎಡಿಜಿಪಿ ಅವರು ಬಳಿಕ ಘಟನೆ ನಡೆದ ಅಂಬಲಪಾಡಿಯ ಪ್ಯಾರಾ ಮೆಡಿಕಲ್ ಕಾಲೇಜಿಗೆ ತೆರಳಿ ಪರಿಶೀಲನೆ ನಡೆಸಿದರು.
ಘಟನೆಯನ್ನು ಮರು ಸೃಷ್ಟಿಸಿ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಸಿಐಡಿ ಅಧಿಕಾರಿಗಳು ಪ್ಲಾಸ್ಟಿಕ್ ಗೊಂಬೆಯೊಂದನ್ನು ತಮ್ಮೊಂದಿಗೆ ತಂದಿದ್ದು, ಅದನ್ನು ಘಟನಾ ಸ್ಥಳದಲ್ಲಿರಿಸಿ ವಿಡಿಯೋ ಚಿತ್ರೀಕರಣದ ಘಟನೆಯನ್ನು ಮರು ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ.
ಸಿಐಡಿ ತಂಡ ಅಂಜುಮಾಲಾ ನಾಯಕ್ ನೇತೃತ್ವದಲ್ಲಿ ಈಗಾಗಲೇ ಆಡಳಿತ ಮಂಡಳಿ ನಿರ್ದೇಶಕಿ ರಶ್ಮಿ ಹಾಗೂ ಇತರರನ್ನು ವಿಚಾರಣೆಗೆ ಒಳಪಡಿಸಿದೆ. ಸಂತ್ರಸ್ತ ವಿದ್ಯಾರ್ಥಿನಿಯ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.