ಅನೈತಿಕ ಪೊಲೀಸ್‌ಗಿರಿಯನ್ನು ಎಂದಿಗೂ ಸಹಿಸಲ್ಲ, ಕಠಿಣ ಕಾನೂನು ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ: ಅನೈತಿಕ ಪೊಲೀಸ್‌ಗಿರಿಯನ್ನು ನಾವು ಯಾವತ್ತೂ ಸಹಿಸುವುದಿಲ್ಲ. ಅದರ ವಿರುದ್ಧ ಎಲ್ಲ ರೀತಿಯ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು. ಕಾನೂನಿಗೆ ತಲೆಬಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರಕಾರದ ನಿಲುವು ಬಹಳ ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್‌ನ ಆದೇಶವನ್ನು ನಾವು ಪಾಲಿಸಬೇಕಾಗಿದೆ. ಇಂತಹ ಹೊತ್ತಿ ನಲ್ಲಿ ನಾವು ಮಳೆಗಾಗಿ ಪ್ರಾರ್ಥಿಸಬೇಕು. ನಮ್ಮ ರಾಜ್ಯಕ್ಕೆ ಅನ್ಯಾಯ ಆಗಬಾರದು ಎಂಬುದು ನನ್ನ ನಿಲುವು ಎಂದರು.
ಕಾಂಗ್ರೆಸ್ ಎಂದಿಗೂ ಜನಪರವಾಗಿರುತ್ತದೆ. ನಾವು ಜನರನ್ನು ಬಿಟ್ಟು ಏನು ಮಾಡುವುದಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿ ಮೂರು ದಿನ ದೆಹಲಿಯಲ್ಲಿದ್ದು, ಸಂಬಂಧಪಟ್ಟ ನೀರಾವರಿ ಸಚಿವರನ್ನು ಭೇಟಿಯಾಗಿ ಮನನಿ ಸಲ್ಲಿಸಿ ಬಂದಿದ್ದಾರೆ. ರಾಜ್ಯ ಸರಕಾರ ಈ ಬಗ್ಗೆ ಕೈಕಟ್ಟಿ ಕುಳಿತಿಲ್ಲ. ರಾಜ್ಯದ ರೈತರ ಹಿತ ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ವಾದ ಸರಿಯಾಗಿದೆಯೋ ಮಂಡನೆ ಸರಿಯಾಗಿಲ್ಲವೋ ಎಂಬು ಚರ್ಚೆ ಅಪ್ರಸ್ತುತ. ಮುಂದೆ ಏನಾಗಬೇಕು ಎಂಬುದಷ್ಟೇ ಸದ್ಯ ಚರ್ಚಿಸಬೇಕಾಗಿದೆ ಎಂದು ಅವರು ಹೇಳಿದರು.
ಮಹಿಳಾ ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ತಂದ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತೇನೆ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷ ಮಹಿಳೆಯರ ಪರವಾಗಿದೆ. ಈ ಮಸೂದೆ ತರಲು ಹಲವು ಬಾರಿ ಪ್ರಯತ್ನ ಮಾಡಿತ್ತು. ಇಂತಹ ಕಾರ್ಯ ಮಾಡಲು ದೊಡ್ಡ ಶಕ್ತಿ ಹಾಗೂ ಧೈರ್ಯ ಬೇಕು. ಉಳುವವನೇ ಹೊಲದ ಒಡೆಯ ಮತ್ತು ಬ್ಯಾಂಕ್ ರಾಷ್ಟ್ರೀಕರಣ ಮಾಡಿದ ಇಂದಿರಾ ಗಾಂಧಿ ಹಾಗೂ 18ನೇ ವಯಸ್ಸಿಗೆ ಮತದಾನದ ಹಕ್ಕು ತಂದ ರಾಜೀವ ಗಾಂಧಿ ಇದೇ ರೀತಿಯ ಧೈರ್ಯವನ್ನು ಪ್ರದರ್ಶಿಸಿದ್ದರು ಎಂದರು.
‘ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಮಾತ್ರ ಬರಪೀಡಿತ ಪಟ್ಟಿಯಲ್ಲಿದೆ. ಎರಡನೇ ಪಟ್ಟಿಯಲ್ಲಿ ಉಳಿದ ತಾಲೂಕುಗಳು ಸೇರ್ಪಡೆ ಮಾಡಲಾಗುತ್ತದೆ. ಬೆಳಗಾವಿ ಜಿಲ್ಲೆಯ 14 ತಾಲೂಕುಗಳ ಪೈಕಿ 13 ತಾಲೂಕನ್ನು ಬರಪೀಡಿತ ಎಂಬುದಾಗಿ ಘೋಷಣೆ ಮಾಡಲಾಗಿದೆ. ಆದರೆ ನನ್ನ ಕ್ಷೇತ್ರ ಮಾತ್ರ ಬರಪೀಡಿತ ಎಂಬುದಾಗಿ ಘೋಷಣೆ ಆಗಿಲ್ಲ. ಅಂದರೆ ಇದರಲ್ಲಿ ಯಾವುದೇ ರಾಜಕಾರಣ ಮಾಡುತ್ತಿಲ್ಲ ಎಂಬುದು ಸ್ಪಷ್ಟ. ಎರಡನೇ ಪಟ್ಟಿಯಲ್ಲಿ ಮಳೆ ಬಾರದ ತಾಲೂಕು ಗಳನ್ನು ಕೂಡ ಬರಪೀಡಿತ ಎಂಬುದಾಗಿ ಘೋಷಣೆ ಮಾಡಲಾಗುವುದು’
-ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರು