ಬೌದ್ಧಿಕ ಸ್ವತ್ತಿನ ಉಪಯೋಗಗಳು ಸಮಾಜದ ಉನ್ನತಿಗಾಗಿ ಬಳಕೆಯಾಗಲಿ: ಗುಜರಾತ್ ನ್ಯಾ.ನಿಕಿಲ್ ಎಸ್ ಕೆರಿಯಲ್

Update: 2023-07-21 16:03 GMT

ಉಡುಪಿ, ಜು.21: ಬೌದ್ಧಿಕ ಸ್ವತ್ತು ಮಾನವನ ಆಲೋಚನಾ ಶಕ್ತಿಯಿಂದ ರೂಪುಗೊಳ್ಳುವ ಸ್ವತ್ತಾಗಿದ್ದು, ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಈ ಬೌದ್ಧಿಕ ಸ್ವತ್ತಿನ ಉಪಯೋಗಗಳು ಸಮಾಜದ ಉನ್ನತ್ತಿಗಾಗಿ ಬಳಕೆಯಾಗಬೇಕು ಎಂದು ಗುಜರಾತಿನ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ನಿಕಿಲ್ ಎಸ್. ಕೆರಿಯಲ್ ಹೇಳಿದ್ದಾರೆ.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ‘ಬೌದ್ಧಿಕ ಸ್ವತ್ತಿನ ಹಕ್ಕುಗಳಿಗೆ ಸಂಬಂಧಿಸಿದಂತೆ ಬದಲಾಗುತ್ತಿರುವ ಸನ್ನಿವೇಶ ಹಾಗೂ ಮುಂದಿನ ದಾರಿ’ ಎಂಬ ವಿಷಯದ ಮೇಲಿನ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಡಿಜಿಟಲ್ ತಂತ್ರಜ್ಞಾನದ ವಿಕಾಸದ ಪ್ರಯುಕ್ತ ಪೈರಸಿ ಹಾವಳಿಯಿಂದ ಬೌದ್ಧಿಕ ಸ್ವತ್ತಿನ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಇದನ್ನು ಸರಿಯಾದ ರೀತಿಯಲ್ಲಿ ರಕ್ಷಿಸುವ ಕಾರ್ಯ ನಡೆಯಬೇಕು ಎಂದವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇರಳದ ಕೇಂದ್ರಿಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳು ಹಾಗೂ ಹಿರಿಯ ಪ್ರಾಧ್ಯಾಪಕ ರಾದ ಪ್ರೊ.(ಡಾ.) ಕೆ.ಸಿ ಸನ್ನಿ ಅವರು ಮಾತನಾಡಿ, ಬೌದ್ಧಿಕ ಸ್ವತ್ತಿನ ಹಕ್ಕುಗಳ ಕುರಿತು ಅನ್ವೇಷಣೆಗಳಿಗೆ ರಕ್ಷಣೆ ಒದಗಿಸಬೇಕು ಹಾಗೂ ಇದರ ಜೊತೆಗೆ ಈ ಅನ್ವೇಷಣೆಗಳು ವಾಣಿಜ್ಯ ಶೋಷಣೆಗೆ ಒಳಗಾಗದಂತೆ ಮಾನವ ಜನಾಂಗದ ಅಭಿವೃದ್ದಿಗೆ ಪೂರಕವಾಗುವಂತೆ ಬಳಕೆಯಾಗಬೇಕೆಂದು ಹೇಳಿದರು.

ಶ್ರೀಲಂಕಾದ ಕೊಲಂಬೊ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥರಾದ ಪ್ರೊ.(ಡಾ.)ಎನ್.ಎಸ್ ಪುನ್ಚೀವ ತಮ್ಮ ದಿಕ್ಸೂಚಿ ಭಾಷಣ ವನ್ನು ನೀಡುತ್ತಾ, ದಕ್ಷಿಣ ಏಷ್ಯಾ ಭಾಗದಲ್ಲಿ ಬೌದ್ಧಿಕ ಸ್ವತ್ತಿನ ಬೆಳವಣಿಗೆಗೆ ಸಂಬಂಧಿಸಿದಂತೆ ವಿಫುಲ ಅವಕಾಶಗಳಿದ್ದು ಇದನ್ನು ಪೂರ್ಣ ಪ್ರಮಾಣದಲ್ಲಿ ಬಳಸಿ ಕೊಂಡಿಲ್ಲ. ಅಲ್ಲದೇ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದಕ್ಷಿಣಾ ಏಷ್ಯಾ ರಾಷ್ಟ್ರಗಳಲ್ಲಿ ಸರಕಾರಗಳ ಕಡೆಯಿಂದ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ನುಡಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ನಿರ್ದೇಶಕರಾದ ಪ್ರೊ.(ಡಾ.) ನಿರ್ಮಲಾಕುಮಾರಿ ಕೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರಾದ ಪ್ರೊ.ರಘುನಾಥ್ ಕೆ.ಎಸ್ ಅತಿಥಿಗಳನ್ನು ಸ್ವಾಗತಿಸಿದರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಬಿಹಾರದ ಆಕ್ಟಿಟಾಸ್ ವಿಕ್ಟೋರಿಯಾ ಫೌಂಡೇಷನ್‌ನ ನಿರ್ದೇಶಕರಾದ ಡಾ. ರಂಗಸ್ವಾಮಿ ವಂದಿಸಿದರು. ಕಾನೂನು ವಿದ್ಯಾರ್ಥಿನಿ ಕೊಯಲ್ ಕಾರ್ಯ ಕ್ರಮ ನಿರೂಪಿಸಿದರು.

ಎರಡು ದಿನಗಳ ಸಮ್ಮೇಳನದಲ್ಲಿ ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ವಿವಿಧ ಕಾಲೇಜುಗಳ ಸುಮಾರು 105 ಮಂದಿ ಪ್ರಾಧ್ಯಾಪಕರು ವಿಷಯ ಮಂಡಿಸಿದ್ದಾರೆ. ಡಾ.ಜಯಮೋಲ್ ಪಿ.ಎಸ್ ಹಾಗೂ ಪ್ರೀತಿ ಹರೀಶ್‌ರಾಜ್ ಸಮ್ಮೇಳನವನ್ನು ಸಂಯೋಜಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News